ಅವಾಚ್ಯ, ಮಾನಹಾನಿ ಪದ ಬಳಕೆ ಆರೋಪ: ರಮಾನಾಥ ರೈಗೆ ಸಮನ್ಸ್

Update: 2019-06-15 16:04 GMT

ಮಂಗಳೂರು, ಜೂ.15: ಕಾಂಗ್ರೆಸ್ ಮುಖಂಡ ರಮಾನಾಥ ರೈ ಸಚಿವರಾಗಿದ್ದ ಸಂದರ್ಭದಲ್ಲಿ ಅಸೈಗೋಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಾಚ್ಯ ಹಾಗೂ ಮಾನಹಾನಿ ಪದ ಬಳಕೆ ಮಾಡಿದ ಆರೋಪ ಕೇಳಿ ಬಂದಿತ್ತು. ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ರೈಗೆ ಮಂಗಳೂರಿನ ಜೆಎಂಎಫ್‌ಸಿ 2ನೇ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಪ್ರಕರಣದ ಕುರಿತು ಬಿಜೆಪಿ ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ರಹೀಂ ಉಚ್ಚಿಲ್ ಜೆಎಂಎಫ್‌ಸಿ 2ನೇ ನ್ಯಾಯಾಲಯದಲ್ಲಿ ನ್ಯಾಯವಾದಿ ಎಸ್.ಎಸ್. ಖಾಝಿ ಮುಖಾಂತರ ಖಾಸಗಿ ದೂರನ್ನು ದಾಖಲಿಸಿದ್ದರು.

ವಿಚಾರಣೆ ಕೈಗೆತ್ತಿಕೊಂಡ ಅಂದಿನ ನ್ಯಾಯಧೀಶರು ದೂರುದಾರರು ನೀಡಿದ ವೀಡಿಯೊ ಸೀಡಿ ಸಹಿತ ಸಾಂದರ್ಭಿಕ ಸಾಕ್ಷಗಳನ್ನು ಗುರುತಿಸಿಕೊಂಡಿದ್ದರು. ಅವರು ಮುಂದಿನ ಆದೇಶ ನೀಡುವ ಹೊತ್ತಿಗೆ ಅವರ ವರ್ಗಾವಣೆ ಆಗಿತ್ತು. ಆ ಬಳಿಕ ಆ ಸ್ಥಾನಕ್ಕೆ ಬಂದ ಹೊಸ ನ್ಯಾಯಾಧೀಶರು ಮತ್ತೊಮ್ಮೆ ಪರಿಶೀಲಿಸಿ ವಕೀಲರ ವಾದವನ್ನು ಆಲಿಸಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಾಚ್ಯ ಹಾಗೂ ಮಾನಹಾನಿ ಪದ ಬಳಕೆ ಮಾಡಿದ ಆರೋಪದಲ್ಲಿ ಮಾಜಿ ಸಚಿವ ರಮಾನಾಥ್ ರೈ ವಿರುದ್ಧ ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರಕಾರ, ಮಾಜಿ ಸಚಿವ ರಮನಾಥ ರೈ ವಿರುದ್ಧ ಕ್ರಿಮಿನಲ್ ಮೊಕದ್ದೆಮೆ ದಾಖಲಿಸಿ ಮಾನನಷ್ಟ ಹಾಗೂ ಅವಹೇಳನಕಾರಿ ಭಾಷೆ ಪ್ರಯೋಗ ಈ ಎರಡು ಅಪರಾಧಗಳಿಗಾಗಿ ಐಪಿಸಿ ಸೆಕ್ಷನ್ 500 ಹಾಗೂ 504ರ ಪ್ರಕಾರ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News