ರಾಷ್ಟ್ರೀಯ ಶಿಕ್ಷಣ ನೀತಿ-2019: ಯುಜಿಸಿ ಬದಲು ರಾಷ್ಟ್ರೀಯ ಶಿಕ್ಷಣ ಆಯೋಗ ಸ್ಥಾಪನೆಗೆ ಶಿಫಾರಸ್ಸು

Update: 2019-06-15 16:35 GMT

ಉಡುಪಿ, ಜೂ.15: ಕೇಂದ್ರದ ಹೊಸ ಸರಕಾರ ಇತ್ತೀಚೆಗೆ ದೇಶದ ಮುಂದಿರಿಸಿದ ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ತಯಾರಾದ ಕರಡು ರಾಷ್ಟ್ರೀಯ ಶಿಕ್ಷಣ ನೀತಿ-2019ರಲ್ಲಿ ಈಗಿರುವ ಯುಜಿಸಿಯ ಬದಲು ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಶಿಕ್ಷಣ ಆಯೋಗ (ಆರ್‌ಎಸ್‌ಎ) ಸ್ಥಾಪನೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಆರ್ಥಿಕ ತಜ್ಞೆ ಹಾಗೂ ಪಾಲಿಸಿ ರಿಸರ್ಚ್ ವಿಶೇಷಜ್ಞೆ ಡಾ.ರಶ್ಮಿ ಭಾಸ್ಕರನ್ ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ)ನ ಗಾಂಧಿಯನ್ ಸೆಂಟರ್ ಫಾರ್ ಫಿಲಾಸೋಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ವತಿಯಿಂದ ಶುಕ್ರವಾರ ಸಂಸ್ಥೆಯ ಸರ್ವೋದಯ ಹಾಲ್‌ನಲ್ಲಿ ಆಯೋಜಿಸಿದ್ದ ಕರಡು ಹೊಸ ಶಿಕ್ಷಣ ನೀತಿಯ ಕುರಿತು ಅವರು ಉಪನ್ಯಾಸ ನೀಡುತಿದ್ದರು.

ಹೊಸ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣದ ಸಬಲೀಕರಣಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಪ್ರತಿಯೊಂದು ಜಿಲ್ಲೆಗಳಲ್ಲೂ ಕನಿಷ್ಠ ಒಂದೊಂದು ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಪ್ರತಿಪಾದಿಸಲಾಗಿದೆ. ಒಟ್ಟು ಮೂರು ವಿಧದ ಶಿಕ್ಷಣ ಸಂಸ್ಥೆಗಳನ್ನು ವರದಿಯಲ್ಲಿ ಪ್ರತಿಪಾದಿಸಲಾಗಿದ್ದು, ಇವುಗಳನ್ನು ಸಂಶೋಧನಾ ವಿವಿ, ಬೋಧನಾ ವಿವಿ ಹಾಗೂ ಕಾಲೇಜುಗಳೆಂದು ವಿಭಾಗಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆಗೆ ಶಿಫಾರಸ್ಸು ಮಾಡಲಾಗಿದೆ ಎಂದರು.

ಇನ್ನು ಮುಂದೆ ಪ್ರತಿ ಕಾಲೇಜುಗಳಿಗೆ ಸ್ವಾಯತ್ತತೆಯನ್ನು ನೀಡುವಂತೆ ಶಿಫಾರಸ್ಸು ಮಾಡಲಾಗಿದ್ದು, ಲಿಬರಲ್ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗಿದೆ.ಪ್ರತಿ ಕಾಲೇಜುಗಳು ಅದರದೇ ಆದ ಪ್ರತ್ಯೇಕ ಪದವಿ ನೀಡುವ ಪ್ರಸ್ತಾಪವೂ ವರದಿಯಲ್ಲಿದೆ.

 ದೇಶದ 3-18 ವರ್ಷ ಪ್ರಾಯದ ಪ್ರತಿಯೊಬ್ಬ ಮಕ್ಕಳಿಗೂ ಗುಣಮಟ್ಟದ ಉಚಿತ ಶಿಕ್ಷಣವನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಮಕ್ಕಳಿಗೆ 5+3+3+4 ಹಂತದ ಶಿಕ್ಷಣವನ್ನು ನೀಡಲಾಗುವುದು. 3ರಿಂದ 8ವರ್ಷ ಪ್ರಾಯದ ಮಗುವಿಗೆ ಮೂರು ವರ್ಷಗಳ ಪೂರ್ವಪ್ರಾಥಮಿಕ, 1,2ನೇ ಗ್ರೇಡ್, 8ರಿಂದ 11ವರ್ಷ ಪ್ರಾಯದ ಮಗುವಿಗೆ 3ರಿಂದ 5ನೇ ಗ್ರೇಡ್, 11ರಿಂದ 14 ವರ್ಷಕ್ಕೆ ಹಿರಿಯ ಪ್ರಾಥಮಿಕ ಅಂದರೆ 6ರಿಂದ 8ನೇ ಗ್ರೇಡ್, 14ರಿಂದ 18 ವರ್ಷಕ್ಕೆ ಪ್ರೌಢ ಶಿಕ್ಷಣ 9ರಿಂದ 12ನೇ ಗ್ರೇಡ್ ಶಿಕ್ಷಣ ದೊರೆಯಬೇಕಾಗಿದೆ.

ಮಗುವಿನ 8ನೇ ವಯಸ್ಸಿನವರೆಗೆ ಆಟ-ಪಾಠ ಹಾಗೂ ಕಲಿಕೆಯ ಪ್ರಾರಂಭಿಕ ಹಂತ, 3ರಿಂದ 5ನೇ ಗ್ರೇಡ್ ತಯಾರಿಕಾ ಹಂತ, 6ರಿಂದ 8ನೇ ಗ್ರೇಡ್ ಮಾಧ್ಯಮಿಕ ಶಿಕ್ಷಣ ಹಾಗೂ 9ರಿಂದ 12ನೇ ಗ್ರೇಡ್ ಪ್ರೌಢ ಶಿಕ್ಷಣವೆಂದು ಪರಿಗಣಿಸಿ ಇದರಲ್ಲಿ ಲಿಬರಲ್ ಕಲಾ ಶಿಕ್ಷಣವನ್ನು ಪರಿಚಯಿಸುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಡಾ.ರಶ್ಮಿ ಭಾಸ್ಕರನ್ ವಿವರಿಸಿದರು.

ವರದಿಯಲ್ಲಿ ಭಾರತೀಯ ಪುರಾತನ ಜ್ಞಾನ ಸಂಪತ್ತನ್ನು ಅಳವಡಿಸುವಂತೆ ಸಲಹೆ ನೀಡಲಾಗಿದೆ. ಇದಕ್ಕಾಗಿ ಈಗಿನ ಪಠ್ಯಪುಸ್ತಕವನ್ನು ಪುನರಚಿಸುವಂತೆ ತಿಳಿಸಲಾಗಿದೆ. ಪುರಾತನ ಭಾರತದ ನಲಂದ ಮತ್ತು ತಕ್ಷಶಿಲಾ ವಿವಿಗಳ ಶಿಕ್ಷಣ ಕ್ರಮಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.2030ರ ಹೊತ್ತಿಗೆ ಮಿಷನ್ ನಲಂದ, ಮಿಷನ್ ತಕ್ಷಶಿಲಾ ಜಾರಿಯಾಗಿರಬೇಕು ಎಂದು ಹೇಳಲಾಗಿದೆ. ವರದಿಯಲ್ಲಿ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದರು.

ಪ್ರಸ್ತುತ ಕೇಂದ್ರ ಸರಕಾರ ದೇಶದ ಒಟ್ಟು ಜಿಡಿಪಿಯ ಶೇ.2.7ನ್ನು ಮಾತ್ರ ಶಿಕ್ಷಣಕ್ಕೆ ವೆಚ್ಚ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯಗಳು ಶಿಕ್ಷಣಕ್ಕೆ ಮಾಡುತ್ತಿರುವ ವೆಚ್ಚವನ್ನು ಪರಿಗಣಿಸಿದಾಗ ದೇಶದ ಒಟ್ಟು ವೆಚ್ಚದ ಶೇ.10 ಮಾತ್ರ ಶಿಕ್ಷಣಕ್ಕೆ ಮೀಸಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಇದನ್ನು ಮುಂದಿನ 10 ವರ್ಷಗಳಲ್ಲಿ ಶೇ.20ಕ್ಕೆ ಏರಿಸಲು ಸೂಚಿಸಲಾಗಿದೆ. ಪ್ರತಿ ವರ್ಷ ಶೇ.1.5ರಂತೆ ಹೆಚ್ಚಿಸುತ್ತಾ ಹೋಗುವಂತೆ ತಿಳಿಸಲಾಗಿದೆ.

ಭಾರತದ ಈಗಿನ ಸಾಕ್ಷರತೆಯ ಪ್ರಮಾಣ ಶೇ.74. ಇದರಲ್ಲಿ ನಾವಿಂದು ಚೀನಕ್ಕಿಂತ 30 ವರ್ಷ ಹಾಗೂ ಅಮೆರಿಕಕ್ಕಿಂತ 70ವರ್ಷಗಳಷ್ಟು ಹಿಂದಿದ್ದೇವೆ. ದೇಶದ ಪ್ರತಿಯೊಬ್ಬ ಶಾಲೆಯಲ್ಲಿ ಕಳೆಯುವ ಸರಕಾರಿ ವಯಸ್ಸು 5.4 ವರ್ಷ ಮಾತ್ರ. 15ರಿಂದ 24 ವರ್ಷ ವಯೋಮಿತಿಯ 3.6ಕೋಟಿ ಯುವಜನತೆ ಈಗಲೂ ಅನಕ್ಷರಸ್ಥರು. ದೇಶದಲ್ಲಿ 800ವಿವಿಗಳು ಹಾಗೂ 40,000 ಕಾಲೇಜು ಗಳು ಇದ್ದರೂ 15ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ 26.5 ಯುವ ಜನತೆ ಇಂದು ಅನಕ್ಷರಸ್ಥರಾಗಿದ್ದಾರೆ ಎಂದು ಡಾ.ರಶ್ಮಿ ತಿಳಿಸಿದರು.

ಹೊಸ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ದೇಶದ ನಾಗರಿಕ ಸಮಾಜದ ಪಾತ್ರವನ್ನು ವಿವರಿಸಲಾಗಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಣದ ಅಗತ್ಯತೆ ಕಂಡುಬರುತ್ತದೆ. ಸದ್ಯ ದೇಶದ ಆರ್ಥಿಕ ಸ್ಥಿತಿಗತಿಯನ್ನು ನೋಡುವಾಗ ಅದು ಯಾವ ರೀತಿ ಅನುಷ್ಠಾನಗೊಳ್ಳುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ಹೊಸ ಶಿಕ್ಷಣ ನೀತಿ ಆಶಯಗಳನ್ನು ಮಾತ್ರ ಹೇಳಿದ್ದು, ಅದರ ಜಾರಿಗೊಳಿಸುವ ವಿಧಾನದ ಕುರಿತು ಏನನ್ನೂ ಹೇಳಿಲ್ಲ ಎಂದು ಡಾ.ರಶ್ಮಿ ಪ್ರತಿಪಾದಿಸಿದರು.

ಸಂಸ್ಥೆಯ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News