ಸ್ವಾಭಿಮಾನ ಬದುಕಿಗಾಗಿ ಹಿಂದೂ ಧರ್ಮ ದಿಕ್ಕರಿಸಿ: ದಲಿತರಿಗೆ ಚಿಂತಕ ನಾರಾಯಣ ಮಣೂರು ಕರೆ

Update: 2019-07-02 15:56 GMT

ಉಡುಪಿ, ಜೂ.15: ದಲಿತರು ನೆಮ್ಮದಿ, ಸ್ವಾಭಿಮಾನದಿಂದ ಹಾಗೂ ಅಸ್ಪೃಶ್ಯರೆಂಬ ಹೀನಾಯ ಮನಸ್ಥಿತಿಯಿಂದ ತಪ್ಪಿಸಿಕೊಂಡು ಬದುಕು ನಡೆಸಲು ಇರುವ ಒಂದೇ ಒಂದು ದಾರಿ ಅಂದರೆ ಹಿಂದೂ ಧರ್ಮವನ್ನು ದಿಕ್ಕರಿಸಿ ಅಂಬೇಡ್ಕರ್ ಅನುಸರಿಸಿದ ಬೌದ್ಧ ಧರ್ಮವನ್ನು ಸ್ವೀಕರಿಸುವುದಾಗಿದೆ ಎಂದು ದಲಿತ ಚಿಂಕ ನಾರಾಯಣ ಮಣೂರು ಹೇಳಿದ್ದಾರೆ.

ಗುಂಡ್ಲು ಪೇಟೆಯಲ್ಲಿ ಇತ್ತೀಚೆಗೆ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಮತ್ತು ದೇಶದ ವಿವಿಧೆಡೆಗಳಲ್ಲಿ ನಡೆಯುತ್ತಿ ರುವ ದಲಿತರ ದೌರ್ಜನ್ಯಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಮತ್ತು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಶನಿವಾರ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಈ ದೇಶದಲ್ಲಿ ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರು ಒಂದಾಗಿ ಬದುಕದಂತೆ ಮನುವಾದಿಗಳು ಪಿತೂರಿ ನಡೆಸುತ್ತಿದ್ದಾರೆ. ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸದ ಹಿಂದೂ ಧರ್ಮಕ್ಕೆ ದಲಿತರು ದಿಕ್ಕಾರ ಹೇಳಿ ಆ ಧರ್ಮವನ್ನು ದಿಕ್ಕರಿಸ ಬೇಕು ಮತ್ತು ಮನೆಯಲ್ಲಿರುವ ದೇವರ ಫೋಟೋಗಳನ್ನು ತಿಪ್ಪೆ ಗುಂಡಿಗೆ ಎಸೆಯಬೇಕು ಎಂದು ಅವರು ಕಿಡಿಕಾರಿದರು.

ಅಮಾನವೀಯವಾಗಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಮನಸ್ಥಿತಿ ಹಾಗೂ ಅದಕ್ಕೆ ಪ್ರಚೋದನೆ ನೀಡಿದ ವ್ಯವಸ್ಥೆ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು. ನಾವೆಲ್ಲ ಹಿಂದೂ ಒಂದು ಹೇಳುವವರು ಗುಂಡ್ಲುಪೇಟೆ ಘಟನೆ ನಡೆಯುವಾಗ ಇವರೆಲ್ಲ ಎಲ್ಲಿ ಸತ್ತಿದ್ದರು ಎಂಬುದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ. ಇದೆಲ್ಲವು ಓಟಿಗಾಗಿ, ಅಧಿಕಾರದ ಲಾಲಸೆಗಾಗಿ ನಮ್ಮನ್ನು ಮತ ಭೇಟೆಯನ್ನಾಗಿ ನೋಡುವುದಾಗಿದೆ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇದೆಯೋ ಇಲ್ಲವೋ ಎಂಬುದು ನೋಡುವುದಕ್ಕೆ ದಲಿತರು ದೇವಾಲಯಕ್ಕೆ ಪ್ರವೇಶಿಸಬೇಕು. ಆಗ ಗುಂಡ್ಲುಪೇಟೆಯಲ್ಲಿ ನಡೆದ ಘಟನೆ ಇಲ್ಲಿ ಮರುಕಳಿಸುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ನಾಗರಿಕ ಹಕ್ಕುಗಳನ್ನು, ಸಂವಿಧಾನವನ್ನು ಗಟ್ಟಿಗೊಳಿಸಬೇಕಾದ ಪೊಲೀಸ್ ಇಲಾಖೆಯಲ್ಲೂ ಮನುವಾದಿ ಮನಸ್ಥಿತಿ ಉಳ್ಳವರು ತುಂಬಿಕೊಂಡಿದ್ದಾರೆ. ಆದ್ದರಿಂದ ದಲಿತರ ಮೇಲಿನ ದೌರ್ಜನ್ಯಗಳನ್ನು ಪೊಲೀಸರು ಮಾನವೀಯ ಅಥವಾ ಕಾನೂನು ದೃಷ್ಠಿಯಿಂದ ನೋಡದೆ ಬದಲಾಗಿ ಕೇವಲ ಜಾತಿ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಚಿಂತಕ ಜಿ. ರಾಜಶೇಖರ್, ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ದಲಿತ ಮುಖಂಡ ಶೇಖರ್ ಹೆಜ್ಮಾಡಿ, ಸಿಪಿಎಂ ಜಿಲ್ಲಾ ಕಾರ್ಯ ದರ್ಶಿ ಬಾಲಕೃಷ್ಣ ಶೆಟ್ಟಿ, ಹೋರಾಟ ಸಮಿತಿಯ ಶ್ಯಾಮರಾಜ್ ಬಿರ್ತಿ, ಹುಸೇನ್ ಕೋಡಿಬೆಂಗ್ರೆ, ಪ್ರಶಾಂತ್ ಜತ್ತನ್ನ, ಲೂವಿಸ್ ಲೋಬೊ, ದಸಂಸ ಮುಖಂಡರಾದ ಎಸ್.ನಾರಾಯಣ, ವಾಸು ನೇಜಾರು ಮೊದಲಾದವರು ಉಪಸ್ಥಿತರಿದ್ದರು.

ಜಾತಿ ವ್ಯವಸ್ಥೆಯ ಅನ್ಯಾಯ ಬಹಳ ಘೋರ

ಜಾತಿ ವ್ಯವಸ್ಥೆಯ ಅನ್ಯಾಯ ಬಹಳ ಘೋರವಾದುದು. ಯಾವ ಹಿಂದೂ ಧರ್ಮ ಅಮಾಯಕ ದಲಿತನ ಮೇಲಿನ ನಡೆದ ಹಲ್ಲೆಗೆ ಉತ್ತರದಾಯಿಯೋ ಅದೇ ಹಿಂದೂ ಧರ್ಮ ಇನ್ನೂ ಘೋರವಾದ ಕೃತ್ಯಗಳನ್ನು ಹಲವು ಕಡೆಗಳಲ್ಲಿ ನಡೆಸಿದೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಟೀಕಿಸಿದರು.

ಗುಂಡ್ಲುಪೇಟೆ ಘಟನೆಯಲ್ಲಿ ಮೇಲ್ಜಾತಿಯವರು, ಪುರೋಹಿತಶಾಹಿ ಮಾತ್ರ ವಲ್ಲದೆ ಪೊಲೀಸ್ ಇಲಾಖೆ ಕೂಡ ಶಾಮೀಲಾಗಿರುವುದು ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಹಾಗೂ ಆಡಳಿತ ಶಾಮೀಲಾಗದೆ ಇಂತಹ ಘೋರ ಅಪರಾಧ ಎಸಗಿದವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಇನ್ನು ಮುಂದೆ ಕೂಡ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂಬ ಭರವಸೆ ನಮಗೆ ಇಲ್ಲ. ಯಾಕೆಂದರೆ ಈ ಹಿಂದೆ ಕಾನೂನು ಕೈಗೆತ್ತಿಕೊಂಡ ಹಿಂದುತ್ವ ವಾದಿಗಳಿಗೆ ಈವರೆಗೆ ಯಾವುದೇ ಶಿಕ್ಷೆಗಳು ಆಗಿಲ್ಲ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News