ಶಾಸಕ ಜಿಗ್ನೇಶ್ ಮೆವಾನಿ ವಿರುದ್ಧ ಪ್ರಕರಣ ದಾಖಲು

Update: 2019-06-15 16:44 GMT

ಅಹ್ಮದಾಬಾದ್, ಜೂ.15: ಖಾಸಗಿ ಶಾಲೆಯೊಂದರ ಹೆಸರು ಕೆಡಿಸುವ ರೀತಿಯಲ್ಲಿ ನಕಲಿ ವೀಡಿಯೊ ಶೇರ್ ಮಾಡಿರುವ ಆರೋಪದಲ್ಲಿ ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಡಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮೆವಾನಿ ಮೇ 20ರಂದು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡ ವೀಡಿಯೋದಲ್ಲಿ ಅರೆಬೆತ್ತಲೆಯಾಗಿದ್ದ ವಿದ್ಯಾರ್ಥಿಯೊಬ್ಬನನ್ನು ವ್ಯಕ್ತಿಯೊಬ್ಬ ಥಳಿಸುತ್ತಿರುವ ದೃಶ್ಯವಿದೆ. ವಲ್ಸಾದ್‌ನ ಆರ್‌ಎಂವಿಎಂ ಶಾಲೆಯ ಶಿಕ್ಷಕ ತನ್ನ ವಿದ್ಯಾರ್ಥಿಗೆ ಥಳಿಸುತ್ತಿರುವುದು ಎಂದು ಮೆವಾನಿ ಅಡಿಬರಹ ನೀಡಿದ್ದರು. ಅಲ್ಲದೆ ಈ ವೀಡಿಯೊವನ್ನು ಪ್ರಧಾನಮಂತ್ರಿ ಕಚೇರಿಗೂ ಟ್ಯಾಗ್ ಮಾಡಿ, ಇದೇನಿದು ಎಂದು ತಿಳಿಸುವಿರಾ ಎಂದು ಪ್ರಶ್ನಿಸಿದ್ದರು. “ಎಂತಹ ಅನಾಗರಿಕ ವರ್ತನೆ.. ಈ ವೀಡಿಯೊವನ್ನು ಎಲ್ಲರೂ ಫಾರ್ವರ್ಡ್ ಮಾಡಿ ಆರ್‌ಎಂವಿಎಂ ಶಾಲೆಯ ಶಿಕ್ಷಕರ ನೀಚ ಕೃತ್ಯವನ್ನು ಖಂಡಿಸಿ” ಎಂದು ಸಂದೇಶ ರವಾನಿಸಿದ್ದರು. ಈ ಬಗ್ಗೆ ಶಾಲೆಯ ಪ್ರಾಂಶುಪಾಲೆ ವಲ್ಸಾದ್ ಪೊಲೀಸ್ ಠಾಣೆಯಲ್ಲಿ ಮೆವಾನಿ ವಿರುದ್ಧ ದೂರು ದಾಖಲಿಸಿದ್ದು ಶಾಲೆ ಮತ್ತು ಶಿಕ್ಷಕರಿಗೆ ಅಪಖ್ಯಾತಿ ತರುವ ಉದ್ದೇಶದಿಂದ ಈ ನಕಲಿ ವೀಡಿಯೊವನ್ನು ಮೆವಾನಿ ಶೇರ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕೆಟ್ಟ ಉದ್ದೇಶದಿಂದ ಗಾಳಿ ಸುದ್ದಿ ಹಬ್ಬಿಸಿರುವ ಹಾಗೂ ಮಾನಹಾನಿಗೆ ಯತ್ನಿಸಿರುವ ಕುರಿತು ಮೆವಾನಿ ವಿರುದ್ಧ ಐಪಿಸಿ ಸೆಕ್ಷನ್‌ನಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News