ಮೂಡುಬಿದಿರೆ: ಜೈನ್ ಹೈಸ್ಕೂಲ್ ಮಕ್ಕಳಿಗೆ ಮತದಾನ ಜಾಗೃತಿ

Update: 2019-06-15 17:01 GMT

ಮೂಡುಬಿದಿರೆ: ಮತದಾನದ ಮಹತ್ವದ ಕುರಿತು ಹಿರಿಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸಾಕಷ್ಟು ನಡೆಯಯುತ್ತವೆ. ಆದರೆ ಹೈಸ್ಕೂಲು ವಿದ್ಯಾರ್ಥಿಗಳಿಗೆ ಇವಿಎಂ ಮೂಲಕ ತಮ್ಮ ಶಾಲಾ ಸಂಸತ್‍ಗೆ ವಿದ್ಯಾರ್ಥಿ ನಾಯಕನ ಆಯ್ಕೆಯ ಅವಕಾಶ ನೀಡುವ ಮೂಲಕ ಸ್ಥಳೀಯ  ಜೈನ ಪ್ರೌಢಶಾಲೆಯಲ್ಲಿ ಶನಿವಾರ ಮೂಡುಬಿದಿರೆ ತಾಲೂಕಿನಲ್ಲೇ ಪ್ರಥಮ ಬಾರಿಗೆ ಶಾಲಾ ಸಂಸತ್‍ಗೆ ಇವಿಎಂ ಮೂಲಕ ಮತದಾನ ಪ್ರಕ್ರಿಯೆ  ನಡೆದಿದೆ.

ಅಧಿಸೂಚನೆ: ಕಳೆದ ಮೇ 31ರಂದು ಚುನಾವಣ ದಿನಾಂಕ ಘೋಷಣೆಯಾಗಿತ್ತು. ಜೂ. 6ರವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿತ್ತು. 7ರಂದು ನಾಮಪತ್ರಗಳ ಪರಿಶೀಲನೆ,8ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.

ಜೂ. 10-13 ರಂದು ಸ್ಪರ್ಧಾಳುಗಳು ಎಲ್ಲ ತರಗತಿಗಳಿಗೆ ಪೂರ್ವಾನುಮತಿಯೊಂದಿಗೆ ಪ್ರವೇಶಿಸಿ ಪ್ರಚಾರ ನಡೆಸಿದರು. ಚುನಾವಣೆ ಸರಳವಾಗಿರಬೇಕು, ಮಿತವ್ಯಯಕಾರಿಯಾಗಿರಬೇಕು ಎಂಬ ಉದ್ದೇಶದಿಂದ ಪ್ರಚಾರ ಪತ್ರ ಮುದ್ರಿಸಲು ಅವಕಾಶ ನೀಡಿಲ್ಲ.

ಹತ್ತನೇ  ಎ ತರಗತಿಯ ಅದಿತಿಗೆ `ಪೇರಿಸಿಟ್ಟ ಪುಸ್ತಕಗಳು' , ಮನಿತ್‍ಗೆ ವಾಚ್, ನಿರ್ದೇಶ್‍ಗೆ ಕೊಡೆ, ಪ್ರನೀತ್‍ಗೆ ಬೈಸಿಕಲ್ ಚಿಹ್ನೆಗಳನ್ನು ನೀಡಲಾಗಿತ್ತು.

ಮತದಾನ:

ಮತದಾನಕ್ಕೂ ಮುನ್ನ `ಅಣಕು ಮತದಾನ ನಡೆಸಿ ಇವಿಎಂ ವ್ಯವಸ್ಥೆ ಸಮರ್ಪಕವಾಗಿದೆ' ಎಂಬುದನ್ನು ಶ್ರತಪಡಿಸಲಾಯಿತು. ಬಳಿಕ ಶೂನ್ಯದಿಂದಲೇ ಮತದಾನ ಆರಂಭವಾಯಿತು.  ಮತದಾರರನ್ನು ಗುರುತಿಸುವ, ದಾಖಲಿಸುವ, ಬೆರಳಿಗೆ ಶಾಯಿ ಹಾಕುವ ಪ್ರಕ್ರಿಯೆ ನಡೆದ ಬಳಿಕ `ಮತದಾರರು ತಮ್ಮ ಮತವನ್ನು  ಮತದಾನದ ಗೂಡಿನ ಮರೆಯಲ್ಲಿ `ಇವಿಎಂ' ಮೂಲಕ ಚಲಾಯಿಸಿ ಮುಗುಳ್ನಗುತ್ತ ಹೊರಬಂದರು. ಹತ್ತನೇ ತರಗತಿಯ ಅಭಿನವ್ ಮೊದಲ ಮತದಾರರಾಗಿ `ಇವಿಎಂ ಮೂಲಕ ಮತ ಚಲಾಯಿಸುವ ಅನುಭವ ಬಹಳ ಖುಷಿ ಕೊಟ್ಟಿದೆ' ಎಂದರು. 

ಎನ್‍ಸಿಸಿ ಕೆಡೆಟ್‍ಗಳನ್ನು  ಗನ್ ಸಹಿತ ರಕ್ಷಣೆಗಾಗಿ ನಿಯೋಜಿಸಲಾಗಿತ್ತು. `ಮತದಾರರು' ಸರತಿಯ ಸಾಲಿನಲ್ಲಿ  ನಿಂತು ತಮ್ಮ ಜೀವನದಲ್ಲಿ ಮೊದಲ ಬಾರಿಗೆ `ಇವಿಎಂ'ಮೂಲಕ ಮತಚಲಾಯಿಸುವ ಸಂಭ್ರಮದಲ್ಲಿದ್ದರು. ಶಾಲೆಯ `ಮತದಾರರ  ಸಾಕ್ಷರತಾ ಸಂಘ'ದ ಮಾರ್ಗದರ್ಶಕ ಶೇಖರ್ ಪ್ರಿಸೈಡಿಂಗ್ ಅಧಿಕಾರಿ (ಮತಗಟ್ಟೆ ಮೇಲ್ವಿಚಾರಕ)ರಾಗಿ, ನಮ್ರತಾ, ದೇವದಾಸ, ನವೀನ್ ಬಂಗೇರ ಕ್ರಮವಾಗಿ ಮೊದಲ, ದ್ವತೀಯ ಹಾಗೂ ತೃತೀಯ ಮತದಾನ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.  ವಿನಯಚಂದ್ರ ಹಾಗೂ ನಿತೇಶ್ ಬಲ್ಲಾಳ್ ವ್ಯವಸ್ಥಾಪಕರಾಗಿದ್ದರು. 

ಉಜಿರೆ ಎಸ್‍ಡಿಎಂ ಪಾಲಿಟೆಕ್ನಿಕ್‍ನ ಇನ್ನೋವೇಟಿವ್ ಕ್ಲಬ್‍ನ  ಬೋಧಕರಾದ ಮಿಥುನ್, ಪ್ರಭಾಕರ್, ಸಂಪತ್, ನಿಕಿತ್ ಈ ಇವಿಎಂ ರೂಪಿಸಿದವರು. ಎರಡು ವರ್ಷಗಳ ಹಿಂದೆಯೇ ಅವರು ಇವಿಎಂ ಮೂಲಕ ಬೆಳ್ತಂಗಡಿ ತಾಲೂಕಿನಾದ್ಯಂತ ಕೆಲವು ವಿದ್ಯಾಸಂಸ್ಥೆಗಳಲ್ಲಿ  ಮತದಾನ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಈ ವರ್ಷ ಮೂಡುಬಿದಿರೆ ತಾಲೂಕಿಗೆ ಆಗಮಿಸಿ  ಜೈನ ಪ್ರೌಢಶಾಲೆಯಲ್ಲಿ  ತಾಲೂಕಿನಲ್ಲೇ ಮೊದಲ ಬಾರಿಗೆ ಇವಿಎಂ ಬಳಸಿ ಶಾಲಾ ಸಂಸತ್‍ಗೆ ಮತದಾನ ನಡೆಸಲು ಪೂರ್ಣ ಸಹಕಾರ ನೀಡಿದ್ದಾರೆ.

ಈ ಇನ್ನೋವೇಟಿವ್ ಕ್ಲಬ್‍ನವರು ಇವಿಎಂ ಮಾತ್ರವಲ್ಲದೆ ಕೃಷಿ ಮತ್ತಿತರ ರಂಗಗಳಿಗೂ ಕೊಡುಗೆಯಾಗಬಲ್ಲ ಅನೇಕ ಉಪಕರಣಗಳನ್ನು ರೂಪಿಸಿದವರು. 

26 ನೋಟಾ ಮತದಾನ: 

8ನೇ, 9ನೇ ಹಾಗೂ 10ನೇ ತರಗತಿಗಳಲ್ಲಿ   643 ಮಂದಿ ವಿದ್ಯಾರ್ಥಿ ಗಳಿದ್ದು  610 ಮಂದಿ ಮತ ಚಲಾಯಿಸುವ ಮೂಲಕ ಶೇ. 94.86ರಷ್ಟು ಮತದಾನವಾಯಿತು.  ಮನಿತ್ 233 ಮತ ಗಳಿಸಿ ಶಾಲಾ ವಿದ್ಯಾರ್ಥಿನಾಯಕರಾಗಿ ಆರಿಸಲ್ಪಟ್ಟರು. ಹತ್ತನೇ ಬಿ ತರಗತಿಯ ಪ್ರನೀತ್ 203 ಮತ ಗಳಿಸಿ ಉಪನಾಯಕರಾಗಿ ಚುನಾಯಿತರಾದರು. 136 ಮತ ಪಡೆದ ಹತ್ತನೇ ಎ ತರಗತಿಯ ಅದಿತಿ ಅವರಿಗೆ ವಿಪಕ್ಷ ನಾಯಕ ಪಟ್ಟ ಒಲಿದುಬಂದಿದೆ. 26 ಮಂದಿ `ಮೇಲಿನವರಾರೂ ತಮಗೆ ಒಪ್ಪಿಗೆ ಇಲ್ಲ' ಎಂದು ಸೂಚಿಸಲು `ನೋಟಾ' ಚಲಾಯಿಸಿದ್ದು ವಿಶೇಷ. ಉಳಿದಂತೆ, ನಿರ್ದೇಶ್‍ಗೆ  ನೋಟಾ ಮತಗಳಿಗಿಂತಲೂ ಕಡಿಮೆ ಅಂದರೆ 12 ಮತ  ಬಿದ್ದವು.

ಶನಿವಾರ `ಬ್ಯಾಗ್ ಇಲ್ಲದೆ ' ಶಾಲೆಗೆ ಬರುವ ದಿನ. ಇದನ್ನು ಮತದಾನಕ್ಕಾಗಿ ಸದ್ಬಳಕೆ ಮಾಡಿದ್ದೇವೆ. ಮುಂದೆ ಮತದಾನದ ವಯಸ್ಸು ಬಂದಾಗ ಯಾವುದೇ ಹಿಂಜರಿಕೆ, ಗೊಂದಲ ಇಲ್ಲದೆ  ಮತ ಚಲಾಯಿಸಲು ಇಲ್ಲಿಂದಲೇ ಅನುಭವ ಸಿಗುವಂತಾಗಲಿ, ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು  ಮತ್ತು ಕರ್ತವ್ಯವಾಗಿದೆ' - ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News