ಚಂಡಮಾರುತ ‘ವಾಯು’ ಇಂದು ಮತ್ತೆ ಗುಜರಾತ್‌ನತ್ತ ಸಾಗುವ ಸಾಧ್ಯತೆ

Update: 2019-06-15 18:06 GMT

ಗಾಂಧಿನಗರ, ಜೂ. 15: ಚಂಡಮಾರುತ ‘ವಾಯು’ವಿನಿಂದ ಈ ವಾರ ಗುಜರಾತ್‌ನಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬುಧವಾರ ಹಾಗೂ ಗುರುವಾರ ನಡುವಿನ ರಾತ್ರಿ ಚಂಡಮಾರುತ ಪಥ ಬದಲಿಸಿತ್ತು. ಚಂಡಮಾರುತ ಮತ್ತೆ ತನ್ನ ಪಥ ಬದಲಿಸಿದ್ದು, ಮುಂದಿನ 48 ಗಂಟೆಗಳಲ್ಲಿ ಗುಜರಾತ್‌ನತ್ತ ಸಾಗುವ ಸಾಧ್ಯತೆ ಇದೆ. ಚಂಡಮಾರುತ ಜೂನ್ 16ರಂದು ಪಥ ಬದಲಿಸುವ ಹಾಗೂ ಜೂನ್ 17-18ರಂದು ಗುಜರಾತ್‌ನ ಕಚ್ಛ್‌ಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭೂ ವಿಜ್ಞಾನದ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ ಹೇಳಿದ್ದಾರೆ.

 ಚಂಡಮಾರುತ ಪಶ್ಚಿಮದ ಕಡೆಗೆ ಸಾಗುತ್ತಿರುವುದರಿಂದ ರಾಜ್ಯಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶುಕ್ರವಾರ ಹೇಳಿಕೆ ನೀಡಿದ ಒಂದು ಗಂಟೆಯ ಬಳಿಕ ರಾಜೀವನ್ ಈ ಹೇಳಿಕೆ ನೀಡಿದ್ದಾರೆ.

ಚಂಡಮಾರುತದ ತೀವ್ರತೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭೂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಭಾರತಕ್ಕೆ ಈ ವರ್ಷ ಅಪ್ಪಳಿಸುತ್ತಿರುವ ಎರಡನೇ ಚಂಡ ಮಾರುತ ‘ವಾಯು’. ಈ ಚಂಡಮಾರುತ ಪೋರ್‌ಬಂದರ್ ಹಾಗೂ ವೆರ್ವಾಲ್ ನಡುವೆ ಗುರುವಾರ ಅಪ್ಪಳಿಸುತ್ತದೆ ಎಂದು ಈ ಹಿಂದೆ ನಿರೀಕ್ಷಿಸಲಾಗಿತ್ತು. ಆದರೆ, ಚಂಡಮಾರುತ ತನ್ನ ದಿಕ್ಕನ್ನು ಬದಲಾಯಿಸಿದೆ ಹಾಗೂ ಅದು ಓಮನ್ ಪಶ್ಚಿಮದತ್ತ ಸಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.

ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದುದರಿಂದ ಸಾಮೂಹಿಕ ವ್ಯವಸ್ಥೆ ಮಾಡಲಾಗಿತ್ತು. ಗುಜರಾತ್ ಕರಾವಳಿ, ದೀವ್‌ನಿಂದ 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಲ್ಲದೆ, ತಟ ರಕ್ಷಣಾ ಪಡೆ, ಸೇನಾ ಪಡೆ, ನೌಕಾ ಪಡೆ, ವಾಯು ಪಡೆ ಹಾಗೂ ಗಡಿ ಭದ್ರತಾ ಪಡೆ ಕಟ್ಟೆಚ್ಚರ ವಹಿಸಿತ್ತು. ಶಾಲೆ ಕಾಲೇಜುಗಳಿಗೆ ರಜೆ ಸಾರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News