ಪಾಕಿಸ್ತಾನದಲ್ಲಿ 595 ಮಕ್ಕಳಿಗೆ ಎಚ್‌ಐವಿ ಸೋಂಕು: ಕಾರಣ ಏನು ಗೊತ್ತೇ ?

Update: 2019-06-16 03:49 GMT

ಇಸ್ಲಾಮಾಬಾದ್: ಪಾಕಿಸ್ತಾನದ ರಟೊಡೆರೊ ಪಟ್ಟಣದಲ್ಲಿ ಬಹುತೇಕ ಮಕ್ಕಳು ಸೇರಿದಂತೆ 700 ಕ್ಕೂ ಹೆಚ್ಚು ಮಂದಿಗೆ ಎಚ್‌ಐವಿ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸರ್ಕಾರ ಅಂತರ್ ರಾಷ್ಟ್ರೀಯ ನೆರವು ಕೋರಿದೆ.

ಅರ್ಹತೆ ಇಲ್ಲದ ವೈದ್ಯರು ಸಿರಿಂಜ್‌ಗಳನ್ನು ಮರುಬಳಕೆ ಮಾಡುತ್ತಿರುವುದು ಸೋಂಕು ಹರಡಲು ಕಾರಣ ಎಂದು ಹೇಳಲಾಗಿದೆ.

"ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತಂಡ ಸೋಂಕು ಹರಡಲು ಕಾರಣಗಳನ್ನು ಪತ್ತೆ ಮಾಡಿ ನಿಯಂತ್ರಣಾ ಕ್ರಮಗಳ ಬಗ್ಗೆ ಸಲಹೆ ನೀಡಲಿದೆ" ಎಂದು ಪಾಕಿಸ್ತಾನದ ಆರೋಗ್ಯ ಸಚಿವ ಜಾಫರ್ ಮಿರ್ಜಾ ಹೇಳಿದ್ದಾರೆ. "ಎಚ್‌ಐವಿ ಪರೀಕ್ಷೆ, ಮಕ್ಕಳ ಎಚ್‌ಐವಿ ಚಿಕಿತ್ಸೆ ಮತ್ತು ಕುಟುಂಬ ಸಲಹೆ ಕ್ಷೇತ್ರಗಳಲ್ಲಿ ಅವರು ತಾಂತ್ರಿಕ ಸಲಹೆ ನೀಡಲಿದ್ದಾರೆ" ಎಂದು ವಿವರಿಸಿದ್ದಾರೆ.

ತಂಡ ಈಗಾಗಲೇ ರಟೊಡೆರೊ ಪಟ್ಟಣವನ್ನು ತಲುಪಿದ್ದು, ಕ್ಷಿಪ್ರ ರೋಗ ಪತ್ತೆ ಪರೀಕ್ಷೆ ಮತ್ತು ಆ್ಯಂಟಿರಿಟ್ರೋವೈರಲ್ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸಿದೆ. ಏಕಬಳಕೆಯ ಸೂಜಿ ಮತ್ತು ಸಿರಿಂಜ್‌ಗಳು ಲಭ್ಯವಾಗುವಂತೆ ನೋಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಮೇ 31ರವರೆಗೆ ಪಟ್ಟಣದಲ್ಲಿ ತಪಾಸಣೆ ಮಾಡಿದಾಗ 728 ಮಂದಿಗೆ ಸೋಂಕು ತಗುಲಿರುವುದು ಕಂಡುಬಂದಿದೆ. ಈ ಪೈಕಿ 595 ಮಕ್ಕಳು ಸೇರಿದ್ದಾರೆ. ಅವರಲ್ಲಿ ಶೇಕಡ 70ರಷ್ಟು ಮಕ್ಕಳು 2 ರಿಂದ 5 ವರ್ಷ ವಯಸ್ಸಿನವರು ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಯೋಜನೆ ಅಧಿಕಾರಿಗಳು ಹೇಳಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಮಕ್ಕಳೇ ಎಚ್‌ಐವಿ ಸೋಂಕಿಗೆ ಬಲಿಯಾಗಿರುವ ವಿಶ್ವದ ಮೊದಲ ನಿದರ್ಶನ ಇದಾಗಿದೆ. 73 ಮಂದಿ ಮಹಿಳೆಯರಿಗೆ ಕೂಡಾ ಎಚ್‌ಐವಿ ಸೋಂಕು ತಗುಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News