ಸಾರ್ವಜನಿಕ ನಿಧಿ ದುರ್ಬಳಕೆ ಪ್ರಕರಣ: ಇಸ್ರೇಲ್ ಪ್ರಧಾನಿಯ ಪತ್ನಿ ತಪ್ಪಿತಸ್ಥೆ ಎಂದ ನ್ಯಾಯಾಲಯ

Update: 2019-06-16 15:13 GMT

 ಜೆರುಸಲೇಂ, ಜೂ.16: ಸರಕಾರಿ ನಿಧಿಯನ್ನು ಭೋಜನಕ್ಕೆ ವೆಚ್ಚ ಮಾಡಿದ ಆರೋಪ ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪತ್ನಿ ಸಾರಾ ನೆತನ್ಯಾಹು ಈ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಇಸ್ರೇಲಿ ನ್ಯಾಯಾಲಯ ರವಿವಾರ ತೀರ್ಪು ನೀಡಿದೆ. ಆದರೆ ನೆತನ್ಯಾಹು ಪರ ವಕೀಲರ ಮನವಿಯ ಮೇರೆಗೆ ಸಾರಾ ಅವರ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ಸಾರಾ ಅವರ ಮೇಲೆ 10,000 ಶೆಕೆಲ್ಸ್ (1,95,000ರೂ.) ದಂಡ ವಿಧಿಸಿರುವ ನ್ಯಾಯಾಧೀಶರು ಆಕೆ ಸರಕಾರದ ಬೊಕ್ಕಸಕ್ಕೆ 45,000 ಶೆಕೆಲ್ಸ್ (8,72,000ರೂ.) ನೀಡುವಂತೆ ಆಗ್ರಹಿಸಿದ್ದಾರೆ. ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಬಾಣಸಿಗರು ಇದ್ದರೂ ಪ್ರತಿಷ್ಠಿತ ಹೋಟೆಲ್‌ಗಳಿಂದ ಆಹಾರವನ್ನು ತರಿಸಿರುವ ಆರೋಪದಲ್ಲಿ 2018ರ ಜೂನ್‌ನಲ್ಲಿ ಸಾರಾ ವಿರುದ್ಧ ವಂಚನೆ ಮತ್ತು ನಂಬಿಕೆದ್ರೋಹ ಪ್ರಕರಣ ದಾಖಲಿಸಲಾಗಿತ್ತು.

 ಪ್ರಧಾನಿ ನಿವಾಸದಲ್ಲಿ ಬಾಣಸಿಗರಿಲ್ಲ ಎಂದು ಸುಳ್ಳು ಹೇಳಿದ್ದ ಸಾರಾ, ಪ್ರತಿಷ್ಠಿತ ಇಟಾಲಿಯನ್ ರೆಸ್ಟೊರೆಂಟ್‌ಗಳು, ಮಧ್ಯಪ್ರಾಚ್ಯದ ಗ್ರಿಲ್‌ಗಳು ಮತ್ತು ಸುಶಿ ಹೋಟೆಲ್‌ನಿಂದ ಆಹಾರಗಳನ್ನು ತರಿಸುತ್ತಿದ್ದರು ಎಂದು ತನಿಖೆ ವೇಳೆ ಬಯಲಾಗಿತ್ತು. ಈ ಆಹಾರಗಳಿಗೆ ಸಾರಾ 1,00,000 ಡಾಲರ್‌ಗಳು (69,83,000ರೂ.) ವ್ಯಯಿಸಿದ್ದರು ಎಂದು ಆರೋಪಿಸಲಾಗಿತ್ತು.

ಸಾರಾ ನೆತನ್ಯಾಹು ತನ್ನ ಮೇಲಿನ ಆರೋಪಗಳನ್ನು ಒಪ್ಪಿಕೊಂಡ ಮತ್ತು ನ್ಯಾಯಾಲಯದಲ್ಲಿ ಆಕೆಯ ಪರ ವಕೀಲರು ಮಾಡಿದ ಮನವಿಯ ನಂತರ ಆಕೆಯ ವಿರುದ್ಧ ಹಲವು ಪ್ರಕರಣಗಳು ಕೈಬಿಡಲಾಗಿದೆ. ತನ್ನ ಕಕ್ಷಿದಾರೆಗೆ ಮಾಧ್ಯಮಗಳು ಈಗಲೇ ಸಾಕಷ್ಟು ಶಿಕ್ಷೆ ನೀಡಿವೆ. ಕೆಟ್ಟ ವರದಿಗಳು ಮತು ಅವಮಾನಗಳಿಂದ ಕೂಡಿದ್ದ ನಾಲ್ಕು ವರ್ಷಗಳು ಅಮಾನವೀಯ ಶಿಕ್ಷೆಗೆ ಸಮಾನವಾಗಿದೆ. ಇತರ ಯಾರೇ ಆಗಿದ್ದರು ಈ ಅವಮಾನವನ್ನು ಸಹಿಸುತ್ತಿರಲಿಲ್ಲ. ಈ ಮಹಿಳೆ ಬಹುಶಃ ಲೋಹದಿಂದ ಮಾಡಲ್ಪಟ್ಟಿದ್ದಾರೆ ಎಂದು ನೆತನ್ಯಾಹು ಅವರ ಅಟರ್ನಿ ಯೊಸ್ಸಿ ಕೊಹೆನ್ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ತನ್ನ ಜೊತೆ ಕೀಳಾಗಿ ನಡೆದುಕೊಂಡಿದ್ದಾರೆ ಎಂದು ಪ್ರಧಾನಿ ನಿವಾಸದ ಮಾಜಿ ಸ್ವಚ್ಛತಾ ಕಾರ್ಮಿಕೆ 2016ರಲ್ಲಿ ಸಾರಾ ನೆತನ್ಯಾಹು ವಿರುದ್ಧ ಆರೋಪ ಮಾಡಿದ್ದರು. ಇಂತಹದ್ದೇ ಇನ್ನೊಂದು ಪ್ರಕರಣದಲ್ಲಿ ಪ್ರಧಾನಿ ನಿವಾಸದ ಉದ್ಯೋಗಿಯ ಮೇಲೆ ನಡೆದ ದೌರ್ಜನ್ಯ ನಡೆಸಿದ ಆರೋಪದಲ್ಲಿ ಸಾರಾ ಅವರ ಮೇಲೆ ನ್ಯಾಯಾಲಯ 47,000 ಡಾಲರ್ (32,82,000ರೂ.)ದಂಡ ವಿಧಿಸಿತ್ತು.

ಪ್ರಧಾನಿ ಪತ್ನಿ ಸದ್ಯ ಒಂದು ಪ್ರಕರಣದಲ್ಲಿ ಒಂದಷ್ಟು ರಿಯಾಯಿತಿ ಪಡೆದಿದ್ದಾರೆ. ಆದರೆ ನೆತನ್ಯಾಹು ಇನ್ನೂ ಲಂಚ, ವಂಚನೆ ಮತ್ತು ನಂಬಿಕೆದ್ರೋಹದಂತಹ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News