2022ರ ಉ.ಪ್ರ. ವಿಧಾನಸಭಾ ಚುನಾವಣೆಗೆ ಸಿದ್ಧತೆ:ಪ್ರಿಯಾಂಕ ಗಾಂಧಿಯ ಹೊಸ ಕಾರ್ಯತಂತ್ರ

Update: 2019-06-16 16:34 GMT

ಹೊಸದಿಲ್ಲಿ,ಜೂ.16: ಪಕ್ಷದ ಸಂಘಟನೆಯಲ್ಲಿ ಹೊಸ ಶಕ್ತಿಯನ್ನು ತುಂಬುವ ಪ್ರಯತ್ನವಾಗಿ ಮತ್ತು 2022ರ ಉ.ಪ್ರ.ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯಕ್ಕೆ ತನ್ನ ಪ್ರವಾಸ ಕಾರ್ಯಕ್ರಮಗಳನ್ನು ಹೆಚ್ಚಿಸಲಿದ್ದಾರೆ ಮತ್ತು ವಾರಕ್ಕೆ ಕನಿಷ್ಠ ಎರಡು ಬಾರಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಕಾಂಗ್ರೆಸ್ ನಾಯಕರೋರ್ವರು ರವಿವಾರ ತಿಳಿಸಿದರು.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ 2022ರ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಸಂಘಟನೆಯನ್ನು ಸಕಾಲದಲ್ಲಿ ಬಲಗೊಳಿಸಲು ಉತ್ತರ ಉ.ಪ್ರ.ದ ಎಐಸಿಸಿ ಉಸ್ತುವಾರಿಯಾಗಿರುವ ಪ್ರಿಯಾಂಕಾ ನೇರವಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ನಾಯಕರು ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಹೆಚ್ಚಿನ ಸಮನ್ವಯ ಮತ್ತು ಸಂವಹನವಿರಬೇಕು ಎಂಬ ಅಭಿಪ್ರಾಯ ಲೋಕಸಭಾ ಚುನಾವಣೆಗಳ ಬಳಿಕ ನಡೆದ ಪುನರ್‌ಪರಿಶೀಲನಾ ಸಭೆಗಳಲ್ಲಿ ವ್ಯಕ್ತವಾಗಿದೆ. ಇದಕ್ಕಾಗಿ ಪ್ರಿಯಾಂಕಾ ವಾರಕ್ಕೆರಡು ಬಾರಿ ಕಾರ್ಯಕರ್ತರನ್ನು ಭೇಟಿಯಾಗಬೇಕು ಎಂದು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ 80 ಸ್ಥಾನಗಳ ಪೈಕಿ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು.

ಇದೇ ವೇಳೆ ಉತ್ತರ ಪ್ರದೇಶದ 11 ಶಾಸಕರು ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಅವರ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ಸದ್ಯವೇ ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News