ಸ್ವಿಸ್ ಖಾತೆ ಹೊಂದಿರುವ 50 ಭಾರತೀಯರ ವಿವರ ಹಂಚಲಿದೆ ಸ್ವಿಝರ್‌ಲ್ಯಾಂಡ್

Update: 2019-06-16 16:41 GMT

 ಹೊಸದಿಲ್ಲಿ,ಜೂ.16: ಸ್ವಿಝರ್‌ಲ್ಯಾಂಡ್‌ನ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿರುವ ಕನಿಷ್ಠ 50 ಭಾರತೀಯ ಪ್ರಜೆಗಳ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿ ಸ್ವಿಸ್ ಅಧಿಕಾರಿಗಳು ತೊಡಗಿಕೊಂಡಿದ್ದಾರೆ. ಇದರೊಂದಿಗೆ ಉಭಯ ರಾಷ್ಟ್ರಗಳ ನಿಯಂತ್ರಣ ಮತ್ತು ಕಾನೂನು ಜಾರಿ ಏಜೆನ್ಸಿಗಳು ಅಕ್ರಮ ಸಂಪತ್ತನ್ನು ಶೇಖರಿಸಿರುವ ಶಂಕಿತ ವ್ಯಕ್ತಿಗಳ ಕುತ್ತಿಗೆಯ ಸುತ್ತ ಕುಣಿಕೆಯನ್ನು ಬಿಗಿಗೊಳಿಸುತ್ತಿವೆ.

 ಇಂತಹ ವ್ಯಕ್ತಿಗಳಲ್ಲಿ ರಿಯಲ್ ಎಸ್ಟೇಟ್‌ನಿಂದ ಹಿಡಿದು ವಜ್ರ ಮತ್ತು ಚಿನ್ನಾಭರಣಗಳ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಯ ಡಮ್ಮಿಗಳು ಸೇರಿದಂತೆ ಕಂಪನಿಗಳೊಂದಿಗೆ ಗುರುತಿಸಿಕೊಂಡಿರುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಉಭಯ ರಾಷ್ಟ್ರಗಳ ನಡುವೆ ಪರಸ್ಪರ ಆಡಳಿತಾತ್ಮಕ ನೆರವು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಕಪ್ಪುಹಣದ ಸುರಕ್ಷಿತ ಸ್ವರ್ಗ ಎಂಬ ತನ್ನ ದೀರ್ಘಕಾಲದ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಸ್ವಿಝರ್‌ಲ್ಯಾಂಡ್ ಕಳೆದ ಕೆಲವು ವರ್ಷಗಳಿಂದ ಹೆಣಗಾಡುತ್ತಿದ್ದರೆ ಭಾರತದಲ್ಲಿ ಇದು ರಾಜಕೀಯವಾಗಿ ಸಂವೇದನಾಶೀಲ ವಿಷಯವಾಗಿದೆ.

 ಮೋದಿ ಸರಕಾರವು 2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಸ್ವಿಸ್ ಬ್ಯಾಂಕ್‌ಗಳು ಸೇರಿದಂತೆ ಕಪ್ಪುಹಣದ ವಿರುದ್ಧ ದಾಳಿ ತನ್ನ ಪ್ರಮುಖ ಆದ್ಯತೆಯಾಗಲಿದೆ ಎಂದು ಹೇಳಿತ್ತು. ಅಲ್ಲಿಂದೀಚೆಗೆ ಉಭಯ ರಾಷ್ಟ್ರಗಳು ಜಾಗತಿಕ ಸ್ವಯಂಚಾಲಿತ ಮಾಹಿತಿ ವಿನಿಮಯ ಮಾರ್ಗಸೂಚಿಗೆ ಸಹಿ ಹಾಕಿದ್ದು ಸೇರಿದಂತೆ ಆರ್ಥಿಕ ಅಪರಾಧಗಳ ಪ್ರಕರಣಗಳಲ್ಲಿ ಮಾಹಿತಿಗಳ ವಿನಿಮಯಕ್ಕೆ ತಮ್ಮ ವ್ಯವಸ್ಥೆಯನ್ನು ಬಲಗೊಳಿಸಿವೆ.

 ಈ ವಿಷಯದಲ್ಲಿ ತಮ್ಮ ದ್ವಿಪಕ್ಷೀಯ ಒಡಂಬಡಿಕೆಯನ್ನೂ ಉಭಯ ದೇಶಗಳು ಇನ್ನಷ್ಟು ಸದೃಢಗೊಳಿಸಿದ್ದು,ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಉತ್ತೇಜಿಸಲು ಆರ್ಥಿಕ ಪರಿಗಣನೆಗಳು,ವಿಶೇಷವಾಗಿ ಅಕ್ರಮ ಸಂಪತ್ತನ್ನು ಶೇಖರಿಸುವಲ್ಲಿ ಕಪಟ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಸಂದರ್ಭಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನೆರವಾಗಿವೆ.

 ಸ್ವಿಸ್ ಸರಕಾರವು ಸಂಬಂಧಿತ ವ್ಯಕ್ತಿಗಳಿಗೆ ಹೊರಡಿಸಿರುವ ಗೆಝೆಟ್ ಅಧಿಸೂಚನೆಗಳನ್ನು ಉಲ್ಲೇಖಿಸಿರುವ ಅಧಿಕಾರಿಗಳು ಭಾರತೀಯ ಅಧಿಕಾರಿಗಳೊಂದಿಗೆ ತಮ್ಮ ಮಾಹಿತಿಗಳನ್ನು ಹಂಚಿಕೊಳ್ಳುವ ಪ್ರಸ್ತಾವನೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೊನೆಯ ಅವಕಾಶವನ್ನು ನೀಡಿ ಕಳೆದ ಕೆಲವು ವಾರಗಳಲ್ಲಿ ಕನಿಷ್ಠ 50 ಭಾರತೀಯ ಪ್ರಜೆಗಳಿಗೆ ನೋಟಿಸ್‌ಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದೊಂದು ವರ್ಷದಲ್ಲಿ ಸ್ವಿಸ್ ಸರಕಾರವು 100ಕ್ಕೂ ಅಧಿಕ ಭಾರತೀಯ ಪ್ರಜೆಗಳ ವಿವರಗಳನ್ನು ಭಾರತ ಸರಕಾರದೊಂದಿಗೆ ಹಂಚಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News