×
Ad

ಪ್ರತ್ಯೇಕತಾವಾದಿ ನಾಯಕರು ವಿದೇಶಿ ನಿಧಿಯನ್ನು ಸ್ವೀಕರಿಸಿ ವೈಯಕ್ತಿಕ ಲಾಭಕ್ಕೆ ಬಳಸಿದ್ದರು:ಎನ್‌ಐಎ ಆರೋಪ

Update: 2019-06-16 23:30 IST

ಹೊಸದಿಲ್ಲಿ,ಜೂ.16: ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರು ವಿದೇಶಿ ನಿಧಿಗಳನ್ನು ಸ್ವೀಕರಿಸಿದ್ದರು ಮತ್ತು ಆಸ್ತಿ ಖರೀದಿಗಾಗಿ ಅಥವಾ ಕುಟುಂಬ ಸದಸ್ಯರ ಶಿಕ್ಷಣ ವೆಚ್ಚಕ್ಕಾಗಿ ಬಳಸಿಕೊಂಡಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ರವಿವಾರ ಹೇಳಿದೆ.

ಈ ತಿಂಗಳ ಆರಂಭದಲ್ಲಿ ಭಯೋತ್ಪಾದನೆಗೆ ಆರ್ಥಿಕ ನೆರವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿಗಳಾದ ಶಬೀರ್ ಶಾ, ಆಸಿಯಾ ಅಂದ್ರಾಬಿ, ಮಸರತ್ ಆಲಂ ಭಟ್ ಮತ್ತು ಯಾಸಿನ್ ಮಲಿಕ್ ಅವರನ್ನು ಎನ್‌ಐಎ ಬಂಧಿಸಿತ್ತು. ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ತಾನದಿಂದ ಹಣ ಸ್ವೀಕರಿಸಿದ್ದನ್ನು ಈ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಅದು ಹೇಳಿರುವುದಾಗಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಭಯೋತ್ಪಾದನೆಗೆ ಆರ್ಥಿಕ ನೆರವು ಪ್ರಕರಣದಲ್ಲಿ ಬಂಧಿತ ಝಹೂರ್ ವಾಟಾಲಿ ಮಲೇಷಿಯಾದಲ್ಲಿ ಅಂದ್ರಾಬಿ ಪುತ್ರನ ಶಿಕ್ಷಣದ ವೆಚ್ಚವನ್ನು ಭರಿಸುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ತಾನು ವಿದೇಶಿ ಮೂಲಗಳಿಂದ ಹಣ ಮತ್ತು ದೇಣಿಗೆಗಳನ್ನು ಸ್ವೀಕರಿಸುತ್ತಿದ್ದೆ ಮತ್ತು ತನ್ನ ನೇತೃತ್ವದ ದುಖ್ತರನ್-ಎ-ಮಿಲಾತ್ ಕಾಶ್ಮೀರದಲ್ಲಿ ಮಹಿಳೆಯರಿಂದ ಪ್ರತಿಭಟನೆಗಳನ್ನು ಸಂಘಟಿಸುತ್ತಿತ್ತು ಎನ್ನುವುದನ್ನು ಅಂದ್ರಾಬಿ ಒಪ್ಪಿಕೊಂಡಿರುವುದಾಗಿ ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನದಲ್ಲಿಯ ಏಜೆಂಟ್‌ಗಳು ಹವಾಲಾ ಜಾಲಗಳ ಮೂಲಕ ಹಣವನ್ನು ರವಾನಿಸುತ್ತಿದ್ದರು ಮತ್ತು ಸೈಯದ್ ಶಾ ಗೀಲಾನಿ ಸೇರಿದಂತೆ ಪ್ರತ್ಯೇಕತಾವಾದಿ ನಾಯಕರಿಗೆ ಅದು ವರ್ಗಾವಣೆಯಾಗುತ್ತಿತ್ತು ಎಂದು ಮಸರತ್ ಭಟ್ ಎನ್‌ಐಎ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ನಿಧಿ ಸಂಗ್ರಹ ಮತ್ತು ಬಳಕೆಯ ಕುರಿತು ಹುರಿಯತ್ ಕಾನ್‌ಫರೆನ್ಸ್‌ನಲ್ಲಿ ಬಿರುಕುಗಳು ಮೂಡಿದ್ದವು ಎಂದೂ ಭಟ್ ಹೇಳಿದ್ದಾಗಿ ಎನ್‌ಐಎ ತಿಳಿಸಿದೆ.

 ಪ್ರತ್ಯೇಕತಾವಾದಿ ನಾಯಕರ ಕೂಟವಾಗಿರುವ ‘ಜಂಟಿ ಪ್ರತಿರೋಧ ನಾಯಕತ್ವ ’ ಮತ್ತು ಹುರಿಯತ್ ಕಾನ್‌ಫರೆನ್ಸ್‌ನ ಗೀಲಾನಿ ಬಣವು ಉದ್ಯಮ ಸಮುದಾಯದಿಂದ ಮತ್ತು ಇತರ ಕೆಲವು ಮೂಲಗಳಿಂದ ಹಣ ಸ್ವೀಕರಿಸಿತ್ತು ಹಾಗೂ ಜನಸಾಮಾನ್ಯರ ದೈನಂದಿನ ಬದುಕನ್ನು ಅಸ್ತವ್ಯಸ್ತಗೊಳಿಸಲು ಬಂದ್ ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರಿಯುವಂತೆ ನೋಡಿಕೊಂಡಿತ್ತು ಎಂದು ಮಲಿಕ್ ಒಪ್ಪಿಕೊಂಡಿರುವದಾಗಿಯೂ ಅದು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News