ಗಡಿಯಲ್ಲಿರುವ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಲು ಭಾರತ-ಮ್ಯಾನ್ಮಾರ್ ಸಿದ್ಧತೆ

Update: 2019-06-16 18:29 GMT

ಹೊಸದಿಲ್ಲಿ, ಜೂ. 15: ಮಣಿಪುರ, ನಾಗಾಲ್ಯಾಂಡ್ ಹಾಗೂ ಅಸ್ಸಾಂನಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರ ಗುಂಪನ್ನು ಗುರಿಯಾಗಿರಿಸಿ ಭಾರತ ಹಾಗೂ ಮ್ಯಾನ್ಮಾರ್ ಸೇನೆಗಳು ಗಡಿಯಲ್ಲಿ ಮೇ 16ರಿಂದ ಮೂರು ವಾರಗಳ ಕಾಲದ ಸಮನ್ವಯ ಕಾರ್ಯಾಚರಣೆ ನಡೆಸಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

‘ಆಪರೇಶನ್ ಸನ್‌ರೈಸ್’ನ ಮೊದಲ ಹಂತ ಮೂರು ತಿಂಗಳ ಹಿಂದೆ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ನಡೆಸಲಾಗಿತ್ತು. ಈ ಸಂದರ್ಭ ಈಶಾನ್ಯದಲ್ಲಿದ್ದ ಉಗ್ರರ ಹಲವು ಶಿಬಿರಗಳನ್ನು ನಾಶಪಡಿಸಲಾಗಿತ್ತು.

ಭಾರತದ ವ್ಯೆಹಾತ್ಮಕ ನೆರೆಯ ದೇಶಗಳಲ್ಲಿ ಮ್ಯಾನ್ಮಾರ್ ಕೂಡ ಒಂದು. ನಾಗಾಲ್ಯಾಂಡ್, ಮಣಿಪುರ ಸಹಿತ ಈಶಾನ್ಯದ ಹಲವು ರಾಜ್ಯಗಳ 1,640 ಕಿ.ಮೀ. ಗಡಿಯನ್ನು ಭಾರತ ಹಂಚಿಕೊಂಡಿದೆ. ಗಡಿ ರಕ್ಷಣೆಯ ವಿಚಾರದಲ್ಲಿ ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಆಳ ಸಮನ್ವಯವನ್ನು ಭಾರತ ಬಯಸುತ್ತಿದೆ.

‘ಆಪರೇಶನ್ ಸನ್‌ರೈಸ್ 2’ ಸಂದರ್ಭ ಕಮ್ತಾಪುರ್ ಲಿಬರೇಶನ್ ಆರ್ಗನೈಸೇಶನ್ (ಕೆಎಲ್‌ಒ), ಎನ್‌ಎಸ್‌ಸಿಎನ್ (ಖಪ್ಲಾಂಗ್), ಯುನೈಟೆಡ್ ಲಿಬರೇಶನ್ ನೇಶನ್ ಆಫ್ ಅಸ್ಸಾಂ (ಐ), ನ್ಯಾಶನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೋಡೊಲ್ಯಾಂಡ್ (ಎನ್‌ಡಿಎಫ್‌ಬಿ) ಸಹಿತ ಹಲವು ಉಗ್ರ ಸಂಘಟನೆಗಳ ಶಿಬಿರಗಳನ್ನು ನಾಶಗೊಳಿಸಲು ಉಭಯ ರಾಷ್ಟ್ರಗಳ ಸೇನೆಗಳು ಪರಸ್ಪರ ಸಮನ್ವಯ ಮಾಡಿಕೊಳ್ಳಲಿವೆ.

ಕಾರ್ಯಾಚರಣೆ ಸಂದಂರ್ಭ ಈ ಗುಂಪುಗಳಿಗೆ ಸೇರಿದ 50ಕ್ಕೂ ಅಧಿಕ ಉಗ್ರರನ್ನು ಬಂಧಿಸಲಾಗಿದೆ ಹಾಗೂ ಅವರ ಶಿಬಿರಗಳನ್ನು ನಾಶಪಡಿಸಲಾಗಿದೆ.

ಬೇಹುಗಾರಿಕೆ ಮಾಹಿತಿ ಹಾಗೂ ತಳಮಟ್ಟದ ಪರಿಸ್ಥಿತಿಯನ್ನು ಅವಲಂಬಿಸಿ ಮೂರನೇ ಹಂತದ ಕಾರ್ಯಾಚರಣೆಯನ್ನು ಉಭಯ ದೇಶಗಳು ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News