ಪುಲ್ವಾಮ: ಯೋಧರಿದ್ದ ವಾಹನದ ಮೇಲೆ ಉಗ್ರರಿಂದ ಐಇಡಿ ದಾಳಿ

Update: 2019-06-17 17:28 GMT

ಪುಲ್ವಾಮಾ,ಜೂ.17: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸೋಮವಾರ ಉಗ್ರರು ಸೇನೆಯ ಶಸ್ತ್ರಸಜ್ಜಿತ ವಾಹನವೊಂದನ್ನು ಗುರಿಯಾಗಿಸಿಕೊಂಡು ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಬಳಸಿ ದಾಳಿಯನ್ನು ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವು ವರದಿಯಾಗಿಲ್ಲ. ತಡರಾತ್ರಿಯವರೆಗೂ ಸೇನಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿತ್ತು.

ಪುಲ್ವಾಮಾದ ಅರಿಹಾಲ್ ಗ್ರಾಮದ ಸಮೀಪ 44 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದ ಕ್ಯಾಸ್ಪರ್ ವಾಹನದ ಮೇಲೆ ದಾಳಿ ನಡೆದಿದ್ದು ವಾಹನಕ್ಕೆ ಹಾನಿಯುಂಟಾಗಿದೆ. ಇದರ ಬೆನ್ನಿಗೇ ಗುಂಡಿನ ದಾಳಿ ಮತ್ತು ಕಲ್ಲುತೂರಾಟ ಆರಂಭಗೊಂಡಿದ್ದು,ಯೋಧರು ಪ್ರತಿದಾಳಿ ನಡೆಸಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿ ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗದ ಕೆಲವೇ ಗಂಟೆಗಳ ಬಳಿಕ ಈ ಸೇನಾ ವಾಹನದ ಮೇಲೆ ದಾಳಿ ನಡೆದಿದೆ.

ಕಳೆದ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ನ ವಾಹನಗಳ ಸಾಲನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ಬಾಂಬರ್ ನಡೆಸಿದ್ದ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.

ತನ್ಮಧ್ಯೆ ಕಳೆದ ವಾರ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರೊಂದಿಗಿನ ಗುಂಡಿನ ಕಾಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ಅರ್ಷದ್ ಅಹ್ಮದ್ ಖಾನ್ ಅವರು ರವಿವಾರ ದಿಲ್ಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಬುಧವಾರ ಭಯೋತ್ಪಾದಕರು ಸಿಆರ್‌ಪಿಎಫ್ ತಂಡದ ಮೇಲೆ ದಾಳಿ ನಡೆಸಿ ಐವರು ಯೋಧರನ್ನು ಕೊಂದಿದ್ದರು. ಮಾಹಿತಿ ತಿಳಿದು ಗುಂಡು ನಿರೋಧಕ ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಖಾನ್ ಅವರು ವಾಹನದಿಂದ ಕೆಳಕ್ಕಿಳಿಯುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News