ವಿಶ್ವಕಪ್: ಬಾಂಗ್ಲಾ ವಿರುದ್ಧ ವಿಂಡೀಸ್ 321/8

Update: 2019-06-17 13:40 GMT

ಟೌಂಟನ್, ಜೂ.17: ಶೈ ಹೋಪ್(96 ರನ್, 121 ಎಸೆತ), ಲೂಯಿಸ್(70 ರನ್, 67 ಎಸೆತ) ಹಾಗೂ ಹೆಟ್ಮೆಯರ್(50, 26 ಎಸೆತ)ಅರ್ಧಶತಕಗಳ ಕೊಡುಗೆ ಸಹಾಯದಿಂದ ವೆಸ್ಟ್‌ಇಂಡೀಸ್ ತಂಡ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್‌ನ 23ನೇ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 321 ರನ್ ಗಳಿಸಿದೆ.

ಸೋಮವಾರ ಟಾಸ್ ಜಯಿಸಿದ ಬಾಂಗ್ಲಾದೇಶ ತಂಡ ವಿಂಡೀಸ್ ತಂಡವನ್ನು ಮೊದಲು ಬ್ಯಾಟಂಗ್‌ಗೆ ಇಳಿಸಿತು. ಕ್ರಿಸ್ ಗೇಲ್ 3.2ನೇ ಓವರ್‌ನಲ್ಲಿ ಶೂನ್ಯಕ್ಕೆ ಸೈಫುದ್ದೀನ್‌ಗೆ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ಲೂಯಿಸ್ ಹಾಗೂ ಹೋಪ್ 2ನೇ ವಿಕೆಟ್‌ಗೆ 122 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ವಿಕೆಟ್‌ಕೀಪರ್ ಹೋಪ್ ಕೇವಲ 4 ರನ್‌ನಿಂದ ಶತಕ ವಂಚಿತರಾದರು. 121 ಎಸೆತಗಳನ್ನು ಎದುರಿಸಿದ ಹೋಪ್ 4 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 96 ರನ್ ಗಳಿಸಿ ತಾಳ್ಮೆಯ ಇನಿಂಗ್ಸ್ ಆಡಿದರು.

ಹೆಟ್ಮೆಯರ್ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಒಳಗೊಂಡ ಬರೋಬ್ಬರಿ 50 ರನ್ ಗಳಿಸಿ ಮುಸ್ತಫಿಝರ್ರಹ್ಮಾನ್‌ಗೆ ವಿಕೆಟ್ ಒಪ್ಪಿಸಿದರು. ಆಗ ವಿಂಡೀಸ್ ಸ್ಕೋರ್ 242ಕ್ಕೆ ತಲುಪಿತ್ತು.

ನಾಯಕ ಜೇಸನ್ ಹೋಲ್ಡರ್(33 ರನ್, 15 ಎಸೆತ, 4 ಬೌಂಡರಿ, 2 ಸಿಕ್ಸರ್)ಬಿರುಸಿನ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಿದರು. ಡಿಎಂ ಬ್ರಾವೊ 15 ಎಸೆತಗಳಲ್ಲಿ 19 ರನ್ ಕಾಣಿಕೆ ನೀಡಿದರು.

ಬಾಂಗ್ಲಾದ ಪರ ಸೈಫುದ್ದೀನ್(3-72),ಮುಸ್ತಫಿಝುರ್ರಹ್ಮಾನ್(3-59) ಹಾಗೂ ಶಾಕಿಬ್ ಅಲ್ ಹಸನ್(2-54)8 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News