ದೇವಸ್ಥಾನದಲ್ಲಿ ಕಳವು ಆರೋಪ: ದಲಿತ ಬಾಲಕನಿಗೆ ಬಿಸಿ ಹೆಂಚಿನ ಮೇಲೆ ಕುಳಿತುಕೊಳ್ಳುವ ಶಿಕ್ಷೆ!

Update: 2019-06-17 17:10 GMT

ವರ್ಧಾ(ಮಹಾರಾಷ್ಟ್ರ), ಜೂ.17: ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಎಂಟರ ಹರೆಯದ ದಲಿತ ಬಾಲಕನಿಗೆ ಬಿಸಿ ಹೆಂಚಿನ ಮೇಲೆ ಕುಳಿತುಕೊಳ್ಳುವ ಶಿಕ್ಷೆ ನೀಡಿದ ಘಟನೆ ಮಹಾರಾಷ್ಟ್ರದ ವರ್ಧಾ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 32ರ ಹರೆಯದ ಅಮೋಲ್ ದೊರೆ ಎಂಬಾತನನ್ನು ಬಂಧಿಸಿದ್ದು, ಆತನ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ)ಕಾಯ್ದೆ- 1989ಅಡಿ ಪ್ರಕರಣ ದಾಖಲಿಸಿದ್ದಾರೆ.

ವರದಿಗಳ ಪ್ರಕಾರ, ದೇವಸ್ಥಾನದ ಪ್ರಾಂಗಣದಲ್ಲಿ ಆಡುತ್ತಿದ್ದ ಬಾಲಕನನ್ನು ಗದರಿಸಿದ ಅಮೋಲ್, ಆತ ಕಾಣಿಕೆ ಹುಂಡಿಯಿಂದ ಚಿಲ್ಲರೆ ಕದಿಯುತ್ತಿದ್ದ ಎಂದು ಆರೋಪಿಸಿದ್ದಾನೆ. ನಂತರ ಬಾಲಕನನ್ನು ಕಟ್ಟಿ ಹಾಕಿದ ಆರೋಪಿ ಆತನನ್ನು ದೇವಸ್ಥಾನದ ಆವರಣದಲ್ಲಿ ಸಂಗ್ರಹಿಸಿಟ್ಟಿದ್ದ ಬಿಸಿ ಹೆಂಚಿನ ಮೇಲೆ ಕುಳಿತುಕೊಳ್ಳುವಂತೆ ಮಾಡಿದ್ದಾನೆ. ಇದರಿಂದ ಬಾಲಕನಿಗೆ ಸುಟ್ಟ ಗಾಯಗಳಾಗಿದ್ದು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ತಂದೆ ನೀಡಿದ ದೂರಿನಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News