ಕಥುವಾ ಪ್ರಕರಣದ ಅಪರಾಧ ಅಮಾನವೀಯ, ಬರ್ಬರ, ಪೈಶಾಚಿಕ ಕೃತ್ಯ

Update: 2019-06-17 16:03 GMT

ಪಠಾಣಕೋಟ್,ಜೂ.17: ಜಮ್ಮು ಪ್ರದೇಶದ ಕಥುವಾ ಜಿಲ್ಲೆಯ ಅಲೆಮಾರಿ ಸಮುದಾಯದ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರು ಜನರನ್ನು ದೋಷಿಗಳೆಂದು ಕಳೆದ ವಾರ ಘೋಷಿಸಿರುವ ಇಲ್ಲಿಯ ವಿಶೇಷ ನ್ಯಾಯಾಲಯವು,ಕಥುವಾ ಪ್ರಕರಣದಲ್ಲಿಯ ಅಪರಾಧವು ಅತ್ಯಂತ ‘ಲಜ್ಜೆಗೇಡಿ,ಅಮಾನವೀಯ ಮತ್ತು ಬರ್ಬರ ’ ರೀತಿಯಲ್ಲಿ ನಡೆಸಲಾದ ‘ಪೈಶಾಚಿಕ ಮತ್ತು ರಾಕ್ಷಸೀಯ’ ಕೃತ್ಯವಾಗಿದೆ ಮತ್ತು ಇದಕ್ಕಾಗಿ ಅಪರಾಧಿಗಳನ್ನು ಶಿಕ್ಷಿಸುವ ಮೂಲಕ ಆದರ್ಶಪ್ರಾಯ ನ್ಯಾಯವನ್ನು ಒದಗಿಸಬೇಕಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶದ ಮೇರೆಗೆ ಪ್ರಕರಣದ ವಿಚಾರಣೆಯನ್ನು ನಡೆಸಿದ ಇಲ್ಲಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೂ.10ರಂದು ತೀರ್ಪು ಪ್ರಕಟಿಸಿತ್ತು. ಪ್ರಮುಖ ಆರೋಪಿಗಳಾದ ಸಾಂಜಿರಾಮ,ದೀಪಕ ಖುಜುರಿಯಾ ಮತ್ತು ಪರ್ವೇಶ ಕುಮಾರ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ಇತರ ಐವರಿಗೆ ಐದು ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ.

 ಸ್ವರ್ಗ ಮತ್ತು ನರಕ ಭೌಗೋಳಿಕ ಸ್ಥಳಗಳಲ್ಲ. ನಮ್ಮ ಚಿಂತನೆಗಳು,ಕೃತ್ಯಗಳು ಮತ್ತು ಗುಣಲಕ್ಷಣಗಳು ನಮಗಾಗಿ ಸ್ವರ್ಗ ಅಥವಾ ನರಕದ ಸ್ಥಿತಿಯನ್ನು ಸೃಷ್ಟಿಸುತ್ತವೆ ಎಂದು ನ್ಯಾ.ಡಾ.ತೇಜ್ವಿಂದರ್ ಸಿಂಗ್ ಅವರು ತನ್ನ 432 ಪುಟಗಳ ತೀರ್ಪಿನ ಆರಂಭದಲ್ಲಿ ಬರೆದಿದ್ದಾರೆ.

ಈ ಪೈಶಾಚಿಕ ಮತ್ತು ರಾಕ್ಷಸೀಯ ಅಪರಾಧವು ಸಮಾಜಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದಿರುವ ಅವರು,ನಿಜವಾದ ತಪ್ಪಿತಸ್ಥರನ್ನು ನ್ಯಾಯದ ತೂಗುಗತ್ತಿಯಡಿ ತರುವ ಅಗತ್ಯವಿದೆ ಎಂದಿದ್ದಾರೆ.

ಅಪ್ರಾಪ್ತ ವಯಸ್ಕ ಬಾಲಕಿಯ ವಿರುದ್ಧ ನಡೆಸಲಾಗಿರುವ ಅಪರಾಧವು ಲಜ್ಜೆಗೇಡಿ, ಅಮಾನವೀಯ ಮತ್ತು ಅನಾಗರಿಕ ಕೃತ್ಯವಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಯಾವುದೇ ಅಮಾಯಕ ವ್ಯಕ್ತಿಗೆ ಅನ್ಯಾಯವಾಗದಂತಿರಲು ನ್ಯಾಯಾಲಯದ ಮುಂದಿರಿಸಿರುವ ಸಾಕ್ಷಗಳನ್ನು ಒರೆಗೆ ಹಚ್ಚಿ ಪರೀಕ್ಷಿಸಬೇಕಾಗಿತ್ತು ಎಂದಿದ್ದಾರೆ. ಪ್ರಕರಣದಲ್ಲಿ ಆರೋಪಿಗಳ ಪರ 57 ವಕೀಲರ ದೊಡ್ಡ ದಂಡೇ ವಾದಿಸಿತ್ತು.

ಪ್ರತಿವಾದಿಗಳ ಪರ ವಕೀಲರು ವಾದಿಸಿರುವಂತೆ ಆರೋಪಿಗಳನ್ನು ಸುಳ್ಳೇ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಮುಸ್ಲಿಂ ಅಲೆಮಾರಿ ‘ಬಕರವಾಲ್ ಸಮುದಾಯ ಮತ್ತು ಸ್ಥಳೀಯ ನಿವಾಸಿಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು ಎನ್ನುವುದನ್ನು ತೋರಿಸುವ 11 ಪೊಲೀಸ್ ಪ್ರಕರಣಗಳನ್ನು ಪಟ್ಟಿ ಮಾಡಿರುವ ನ್ಯಾಯಾಲಯವು,ಈ ವರ್ಷದ ಜ.10ರಂದು ಅಪರಾಧ ನಡೆದಿದ್ದ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಯ ವಾತಾವರಣವಿತ್ತು ಎನ್ನುವುದನ್ನು ಸಾಬೀತುಗೊಳಿಸಿರುವ ಇತರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಪ್ರದೇಶದ ನಿವಾಸಿಗಳು ಬಕರವಾಲ್ ಸಮುದಾಯವನ್ನು ಒಪ್ಪಿಕೊಂಡಿರಲಿಲ್ಲ ಮತ್ತು ಇದರಿಂದ ಉಭಯರ ನಡುವಿನ ಸಂಬಂಧಗಳು ಹಳಸಿದ್ದವು,ಹೀಗಾಗಿ ಅಪರಾಧದ ಹಿಂದೆ ಬಲವಾದ ಉದ್ದೇಶವಿತ್ತು ಎಂದು ತೀರ್ಪು ಹೇಳಿದೆ.

ತನಿಖೆಯು ದೋಷಪೂರ್ಣವಾಗಿತ್ತು ಎಂಬ ಆರೋಪಿಗಳ ಪರ ವಕೀಲರ ನಿವೇದನೆಯನ್ನು ತಿರಸ್ಕರಿಸಿರುವ ನ್ಯಾ.ಸಿಂಗ್ ಅವರು,ಇದು ಗಂಭೀರ ಕ್ರಿಮಿನಲ್ ವಿಚಾರಣೆಯಾಗಿದೆ ಮತ್ತು ಕಾನೂನು ತಜ್ಞರು ಕೆಲವು ತಾಂತ್ರಿಕ ಆಕ್ಷೇಪಗಳನ್ನು ಎತ್ತಿದ್ದಾರೆಂಬ ಮಾತ್ರಕ್ಕೆ ಆರೋಪಿಗಳಿಗೆ ಸಂಶಯದ ಲಾಭವನ್ನು ನೀಡುವಂತಿಲ್ಲ ಎಂದಿದ್ದಾರೆ.

ಯಾವುದೇ ಆರೋಪಿಯ ವಿರುದ್ದ ನೇರ ಸಾಕ್ಷಗಳಿಲ್ಲ ಎಂಬ ಪ್ರತಿವಾದಿ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿರುವ ತೀರ್ಪು,ಸಾಂದರ್ಭೀಕ ಸಾಕ್ಷಗಳು ಅಪರಾಧವನ್ನು ಸಾಬೀತುಗೊಳಿಸಿವೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News