ಮಂಗಳೂರು: ವೈದ್ಯರ ಯಶಸ್ವಿ ಮುಷ್ಕರ; ‘ಒಪಿಡಿ’ ಸೇವೆ ನೀಡದೆ ಆಕ್ರೋಶ

Update: 2019-06-17 16:23 GMT

ಮಂಗಳೂರು, ಜೂ.17: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆಸಲಾದ ಹಲ್ಲೆ ಕೃತ್ಯವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಕರೆಯಂತೆ ಸೋಮವಾರ ಬೆಳಗ್ಗೆ 6ರಿಂದ ಮಂಗಳವಾರ ಮುಂಜಾನೆಯವರೆಗೆ ದ.ಕ.ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ‘ಒಪಿಡಿ’ (ಹೊರ ರೋಗಿ ವಿಭಾಗ) ಸೇವೆ ನೀಡದೆ ವೈದ್ಯರು ಯಶಸ್ವಿ ಮುಷ್ಕರ ನಡೆಸಿದರು.

ದ.ಕ.ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳು ಈ ಮುಷ್ಕರಲ್ಲಿ ಪಾಲ್ಗೊಂಡಿದ್ದು, ಕಾಲೇಜು ಮತ್ತು ಆಸ್ಪತ್ರೆಯ ಮುಖ್ಯಸ್ಥರು ಮುಷ್ಕರದ ಯಶಸ್ವಿಗೆ ಸಾಥ್ ನೀಡಿದರು. ಬಹುತೇಕ ಎಲ್ಲ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ಬಂದ್ ಬಗ್ಗೆ ಸೂಚನಾಲಕಗಳನ್ನು ಅಳವಡಿಸಿದ ಕಾರಣ ಹೆಚ್ಚಿನ ಸಮಸ್ಯೆಯಾಗಲಿಲ್ಲ.

ಸೋಮವಾರ ಬೆಳಗ್ಗಿನಿಂದಲೇ ಒಪಿಡಿ ಸಹಿತ ಯಾವುದೇ ಸೇವೆ ನೀಡಲಿಲ್ಲ. ತುರ್ತು ಸೇವೆಯನ್ನು ಹೊರತುಪಡಿಸಿ ಖಾಸಗಿ ಆಸ್ಪತ್ರೆಯ ಮೆಡಿಕಲ್‌ಗಳಲ್ಲೂ ಕೂಡ ಔಷಧಗಳು ರೋಗಿಗಳಿಗೆ ಲಭ್ಯವಾಗಲಿಲ್ಲ. ಆದರೆ, ಯಾರಿಗೂ ಯಾವುದೇ ತೊಂದರೆಯಾಗದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿದ ಸ್ತರದ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರು.

ಈ ಮಧ್ಯೆ ಸೋಮವಾರ ಬೆಳಗ್ಗೆ ಭಾರತೀಯ ವೈದ್ಯಕೀಯ ಸಂಘದ ದ.ಕ.ಜಿಲ್ಲಾ ಸಮಿತಿಯು ಹಂಪನಕಟ್ಟೆಯ ಐಎಂಎ ಹಾಲ್‌ನಲ್ಲಿ ಸಭೆ ಸೇರಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಅಲ್ಲದೆ ವೈದ್ಯರ ಮೇಲಾಗುವ ಹಲ್ಲೆ ಮತ್ತು ಆಸ್ಪತ್ರೆಗಳಲ್ಲಿ ನಡೆಯುವ ದಾಂಧಲೆ ಕೃತ್ಯವನ್ನು ಸಭೆ ಖಂಡಿಸಿತು. ಭವಿಷ್ಯದ ದಿನಗಳಲ್ಲಿ ಯಾರೂ ಈ ಸೇವೆಯಲ್ಲಿ ನಿರತರಾದವರ ಮೇಲೆ ಹಲ್ಲೆ ನಡೆಸುವಂತಹ ವಾತಾವರಣ ಸೃಷ್ಟಿಯಾಗದಂತೆ ಸರಕಾರ ಕ್ರಮ ಜರುಗಿಸಬೇಕು. ಹಲ್ಲೆ ಮತ್ತು ದಾಂಧಲೆ ನಡೆಸುವವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲು ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿತು.

ಸಭೆಯಲ್ಲಿ ಸಂಘದ ದ.ಕ. ಜಿಲ್ಲಾಧ್ಯಕ್ಷ ಡಾ.ಬಿ.ಸಚ್ಚಿದಾನಂದ ರೈ, ಡಾ. ಸುಧೀಂದ್ರ ರಾವ್,ಡಾ. ಅಣ್ಣಯ್ಯ ಕುಲಾಲ್, ಡಾ. ವಿನಯ ಕುಮಾರ್, ಡಾ. ಪ್ರಶಾಂತ್ ಮಾರ್ಲ, ಡಾ. ಯೂಸುಫ್ ಕುಂಬ್ಳೆ, ಡಾ. ತ್ವಾಹಿರ್, ಡಾ. ಲಕ್ಷ್ಮಣ ಪ್ರಭು, ಡಾ. ಅಜಿತ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಸಂಘದ ಕೇಂದ್ರ ಸಮಿತಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ತಿಳಿಸಿದರು.

ಕಪ್ಪು ಪಟ್ಟಿ ಧರಿಸಿ ಸೇವೆ: ಜಿಲ್ಲಾ ವೆನ್ಲಾಕ್, ಲೇಡಿಗೋಶನ್ ಸಹಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಸಿಗದ ಕಾರಣ ಸರಕಾರಿ ಆಸ್ಪತ್ರೆಯತ್ತ ಹೆಜ್ಜೆ ಹಾಕಿದರು. ಇದರಿಂದ ಈ ಹಿಂದಿಗಿಂತ ಹೆಚ್ಚಿನ ಸಂಖ್ಯೆಯ ರೋಗಿಗಳು ಸರಕಾರಿ ಆಸ್ಪತ್ರೆಯ ಸೇವೆಯನ್ನು ಬಳಸಿಕೊಂಡರು. ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ನಡೆದ ಕೃತ್ಯವನ್ನು ಖಂಡಿಸಿ ಸರಕಾರಿ ವೈದ್ಯರು ಮತ್ತು ಸಿಬ್ಬಂದಿ ವರ್ಗವು ಸೇವೆ ನೀಡಿದರೂ ಕೂಡ ಸಾಂಕೇತಿಕವಾಗಿ ಕಪ್ಪುಪಟ್ಟಿ ಧರಿಸಿ ಗಮನ ಸೆಳೆದರು.

 ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಸೋಮವಾರ ರೋಗಿಗಳ ಸಂಖ್ಯೆ ಕಡಿಮೆ ಇದ್ದುದು ವಿಶೇಷ. ಪ್ರತಿ ದಿನ ಹೊರ ರೋಗಿ ವಿಭಾಗದಲ್ಲಿ 150ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದುಕೊಂಡರೆ, ಸೋಮವಾರ ಕೇವಲ 65 ಮಂದಿ ಚಿಕಿತ್ಸೆ ಪಡೆದಿದ್ದರು. ಆದರೆ ಎರಡೂ ಆಸ್ಪತ್ರೆಗಳಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿ ಮುಷ್ಕರಕ್ಕೆ ನೈತಿಕ ಬೆಂಬಲ ನೀಡಿದರು.

ವೈದ್ಯರ ಮುಷ್ಕರಕ್ಕೆ ಜಿಲ್ಲೆಯ ಆಯುಷ್ ಫೌಂಡೇಶನ್ ಕೂಡ ಬೆಂಬಲ ವ್ಯಕ್ತಪಡಿಸಿತ್ತು. ವೈದ್ಯರ ಮುಷ್ಕರಕ್ಕೆ ಸಂಬಂಧಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ ‘ಖಾಸಗಿ ವೈದ್ಯರ ಮುಷ್ಕರದಿಂದ ಜಿಲ್ಲೆಯಲ್ಲಿ ಯಾರಿಗೂ ಯಾವುದೇ ತೊಂದರೆ ಯಾಗಲಿಲ್ಲ. ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯಲ್ಲದೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದಿದ್ದಾರೆ.

ಪರದಾಡಿದ ರೋಗಿಗಳು: ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಸಿಗುವುದಿಲ್ಲ ಎಂದು ವೈದ್ಯಕೀಯ ಸಂಘವು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿತ್ತು. ಆದರೆ ಹೆಚ್ಚಿನವರಿಗೆ ಈ ಮಾಹಿತಿ ಸಿಗದ ಕಾರಣ ಖಾಸಗಿ ಆಸ್ಪತ್ರೆಗೆ ತೆರಳಿ ‘ಒಪಿಡಿ ಸೇವೆ’ಯ ಅಲಭ್ಯತೆಯ ಕುರಿತಾದ ಬ್ಯಾನರ್‌ಗಳನ್ನು ಗಮನಿಸಿ ಮರಳಿ ಬರುವ ದೃಶ್ಯವೂ ಕಂಡು ಬಂತು. ಅಲ್ಲದೆ ಸೇವೆ ಪಡೆಯಲು ಬಂದರ ಬಳಿ ಸರಕಾರಿ ಆಸ್ಪತ್ರೆಗೆ ತೆರಳಿ ಸೇವೆ ಪಡೆಯುವಂತೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವರ್ಗ ಸೂಚಿಸುತ್ತಿರುವುದೂ ಕಂಡು ಬಂತು. ಒಟ್ಟಿನಲ್ಲಿ ವೈದ್ಯರ ಮುಷ್ಕರವು ಸಾಮಾನ್ಯ ರೋಗಿಗಳಿಗೆ ಹೆಚ್ಚಿನ ಸಮಸ್ಯೆಯಾಗದಿದ್ದರೂ ಕೂಡ ರೋಗಿಗಳು ಪರದಾಡಿದರು.

ಅನುಚಿತ ವರ್ತನೆ : ಈ ಮಧ್ಯೆ ವೆನ್ಲಾಕ್ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯರು ಚಿಕಿತ್ಸೆ ನೀಡಲಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ಬಗ್ಗೆ ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ. ರಾಜೇಶ್ವರಿ ದೇವಿ ಮಾತನಾಡಿ ‘ಸೋಮವಾರ ಮುಂಜಾನೆ ಸುಮಾರು 4:15ರಿಂದ 4:30ರವರೆಗೆ ವಾಹನವೊಂದರಲ್ಲಿ ಪಾನಮತ್ತರಾಗಿ ಬಂದ ಕೆಲವರು ತುರ್ತು ಚಿಕಿತ್ಸೆ ನೀಡಲು ಒತ್ತಾಯಿಸಿದರು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗವು ರೋಗಿಗೆ ಚಿಕಿತ್ಸೆ ನೀಡಲು ಮುಂದಾದರೂ ಕೂಡ ಅವಾಚ್ಯ ಶಬ್ದದಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದ್ದು, ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ವಿಶ್ವಾಸವಿದೆ’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News