ಕಾಶ್ಮೀರದಲ್ಲಿ ಎನ್‌ಕೌಂಟರ್: ಓರ್ವ ಸೈನಿಕ ಹುತಾತ್ಮ, ಇಬ್ಬರು ಉಗ್ರರು ಹತ

Update: 2019-06-18 04:56 GMT

ಶ್ರೀನಗರ, ಜೂ.18: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಓರ್ವ ಸೈನಿಕ ಹುತಾತ್ಮರಾಗಿದ್ದಾರೆ.

   ಎನ್‌ಕೌಂಟರ್ ನಡೆದ ಪ್ರದೇಶದ ಕಟ್ಟಡವೊಂದರಲ್ಲಿ ಓರ್ವ ಉಗ್ರ ಅಡಗಿಕುಳಿತುಕೊಂಡಿದ್ದು, ಎನ್‌ಕೌಂಟರ್ ಮುಂದುವರಿದಿದೆ. ಎಲ್ಲ ಉಗ್ರರು ಪಾಕಿಸ್ತಾನ ಮೂಲದ ಜೈಶ್ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಉಗ್ರರು ಪುಲ್ವಾಮದಲ್ಲಿ ಸೋಮವಾರ ಸುಧಾರಿತ ಸ್ಪೋಟಕ ಸಾಧನದೊಂದಿಗೆ ಸೇನಾ ವಾಹನವನ್ನು ಗುರಿಯಾಗಿರಿಸಿ ನಡೆಸಿದ್ದ ದಾಳಿಗೆ ಆರು ಸೈನಿಕರು ಹಾಗೂ ಇಬ್ಬರು ನಾಗರಿಕರಿಗೆ ಗಾಯವಾಗಿತ್ತು. ಸೋಮವಾರ ಅನಂತನಾಗ್‌ನಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮೇಜರ್ ಕೇತನ್ ಶರ್ಮಾ ಹುತಾತ್ಮರಾಗಿದ್ದರು. ಮೂವರು ಸೈನಿಕರು ಗಾಯಗೊಂಡಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಆರ್ಮಿ ಚೀಫ್ ಜನರಲ್ ಬಿಪಿನ್ ರಾವತ್ ಅವರು ಮೇಜರ್ ಕೇತನ್ ಶರ್ಮಾಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News