ಬಿಹಾರ ಮಕ್ಕಳ ಸಾವು ಪ್ರಕರಣ: ಕೇಂದ್ರ, ರಾಜ್ಯ ಆರೊಗ್ಯ ಸಚಿವರ ವಿರುದ್ಧ ಕೋರ್ಟ್ ಕೇಸ್

Update: 2019-06-18 05:41 GMT

ಪಾಟ್ನಾ, ಜೂ.18: ಬಿಹಾರದಲ್ಲಿ ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಮೆದುಳಿನ ಉರಿಯೂತದಿಂದಾಗಿ 82 ಮಕ್ಕಳು ಸಾವಿಗೀಡಾದ ಘಟನೆ ಸಂಬಂಧ ನಿರ್ಲಕ್ಷ್ಯದ ಆರೋಪ ಹೊರಿಸಿ ಮುಝಫ್ಫರಪುರ್ ಸಿಜೆಎಂ ನ್ಯಾಯಾಲಯದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹಾಗೂ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ವಿರುದ್ಧ ಸಾಮಾಜಿಕ ಕಾರ್ಯಕರ್ತ ತಮನ್ನಾ ಹಾಶ್ಮಿ ಸೋಮವಾರ ಪ್ರಕರಣ ದಾಖಲಿಸಿದ್ದಾರೆ.

ಮಕ್ಕಳಲ್ಲಿ ಈ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ಇಬ್ಬರು ಸಚಿವರೂ ವಿಫಲರಾಗಿದ್ದಾರೆ ಎಂದು ಅಪೀಲಿನಲ್ಲಿ ಆರೋಪಿಸಲಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಮಕ್ಕಳ ಬಲಿ ಪಡೆಯುತ್ತಿರುವ ಈ ಕಾಯಿಲೆಯಿಂದ ಪೀಡಿತ ಪ್ರದೇಶಗಳ ಜನರಿಗೆ ಈ ಕುರಿತಂತೆ ಜಾಗೃತಿ ಮೂಡಿಸಲು ಅವರೇನೂ ಮಾಡಿಲ್ಲ ಎಂದು ದೂರಲಾಗಿದೆ.

ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜೂನ್ 24ಕ್ಕೆ ನಿಗದಿಪಡಿಸಿದೆ. ತಾವು ಇಬ್ಬರು ಸಚಿವರುಗಳ ವಿರುದ್ಧ ಐಪಿಸಿ ಸೆಕ್ಷನ್ 323, 308 ಹಾಗೂ 504 ಅನ್ವಯ ಪ್ರಕರಣ ದಾಖಲಿಸಿರುವುದಾಗಿ ಹಾಶ್ಮಿ ಹೇಳಿದ್ದಾರೆ. ನಿರ್ಲಕ್ಷ್ಯ ಹಾಗೂ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸಚಿವ ಹರ್ಷವರ್ಧನ್, ಆರೋಗ್ಯ ಖಾತೆಯ ಸಹಾಯಕ ಸಚಿವ ಅಶ್ವನಿ ಕುಮಾರ್ ಚೌಬೆ ಹಾಗೂ ಬಿಹಾರ ಆರೋಗ್ಯ ಸಚಿವರು ರವಿವಾರ ಮೆದುಳಿನ ಉರಿಯೂತ ಸಮಸ್ಯೆಗೊಳಗಾಗಿರುವ ಮಕ್ಕಳು ಚಿಕಿತ್ಸೆ ಪಡೆಯುತ್ತಿರುವ ಮುಝಫ್ಫರಪುರ್ ನ ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News