ಹೆಜಮಾಡಿ: ಸಚಿವ ದೇಶಪಾಂಡೆಯಿಂದ ರಸ್ತೆ ಕಾಮಗಾರಿ ಪರಿಶೀಲನೆ

Update: 2019-06-18 05:53 GMT

 ಪಡುಬಿದ್ರೆ, ಜೂ.18: ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದು ಬೆಳಗ್ಗೆ ಹೆಜಮಾಡಿಗೆ ಆಗಮಿಸಿದ್ದು, ಮಳೆ ಹಾನಿಗೊಳಗಾಗಿರುವ ಇಲ್ಲಿನ ಹಳೆ ಎಂಬಿಸಿ ರಸ್ತೆಯ ದುರಸ್ತಿ ಕಾಮಗಾರಿಯನ್ನು ವೀಕ್ಷಿಸಿದರು.

ಯಾವುದೇ ರಸ್ತೆ ಕಾಮಗಾರಿಯ ವೇಳೆ ಚರಂಡಿ ಕಾಮಗಾರಿಯ ಕ್ರಿಯಾ ಯೋಜನೆ ರೂಪಿಸಿ ಅದಕ್ಕೆ ಬೇಕಾದ ಪ್ರಸ್ತಾಪಗಳನ್ನು ಸಲ್ಲಿಸಿ ಎಂದು ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿದ್ದರೆ ರಸ್ತೆ ಸುರಕ್ಷತೆ ಬಲು ಕಷ್ಟ. ಹಾಗಾಗಿ ಯಾವುದೇ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮುನ್ನ ರಸ್ತೆಯ ಇಕ್ಕೆಲಗಳ ಚರಂಡಿಯನ್ನು ಸೂಕ್ತವಾಗಿ ನಿರ್ಮಿಸುವುದು ಅತ್ಯಗತ್ಯ. ಇನ್ನು ಮುಂದೇ ಯಾವುದೇ ರಸ್ತೆಗಳ ರಸ್ತೆ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸುವಾಗ ಚರಂಡಿ ಕಾಮಗಾರಿಗೂ ಅನುದಾನ ಒದಗಿಸುವಂತೆ ಸೂಚಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹೆಜಮಾಡಿಗೆ ಪ್ರಥಮ ಬಾರಿ ಆಗಮಿಸಿದ ಸಚಿವದೇಶಪಾಂಡೆಯವರನ್ನು ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್, ಸಹಾಯಕ ಆಯುಕ್ತ ಮಧುಕೇಶ್ವರ್, ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು.

 ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮುಖ್ಯ ಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೂಹಾರ ಹಾಕಿ ಬರಮಾಡಿಕೊಂಡರು.

ಈ ಸಂದರ್ ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಕಾಪು ತಹಶೀಲ್ದಾರ್ ಸಂತೋಷ್ ಕುಮಾರ್, ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಕುಲ್‌ದಾಸ್, ಎಇಇ ಜಗದೀಶ್ ಭಟ್, ಕಾಪು ಆರ್‌ಐ ರವಿಶಂಕರ್, ವಿಎ ವಿಜಯ್, ಕಾಪು ನಿರೀಕ್ಷಕ ಹಾಲಮೂರ್ತಿ ರಾವ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News