ಕಣ್ಮರೆಯಾಗುತ್ತಿರುವ ಕಾಂಡ್ಲಾ ವನಗಳ ಅಭಿವೃದ್ಧಿಗೆ ಒತ್ತು

Update: 2019-06-18 11:09 GMT

ಮಂಗಳೂರು, ಜೂ.18: ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿಯ 310 ಕೋ.ರೂ. ಮಹತ್ವದ ‘ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ’ಗೆ ಕೇಂದ್ರ ಸರಕಾರವು ಅನುಮೋದನೆ ನೀಡಿದೆ. ಇದರಿಂದ ಕಣ್ಮರೆಯಾಗುತ್ತಿರುವ ಕಾಂಡ್ಲಾ ವನಗಳ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ.

ಸಮುದ್ರ ಹಾಗೂ ನದಿ ಮಧ್ಯದ ಮುಖಜ ಭೂಮಿಯ ಉಪ್ಪು ಹಾಗೂ ಸಿಹಿ ನೀರಿನ ಸಂಗಮದ ಕೆಸರಿನ ನಡುವೆ ವಿಸ್ತಾರವಾಗಿ ಹರಡುವ ದಪ್ಪನೆಯ ಸಸ್ಯರಾಶಿ ಕಾಂಡ್ಲಾ ವನ. ಒಂದು ರೀತಿಯಲ್ಲಿ ಇದು ಸಮುದ್ರ ಮತ್ತು ನದಿ ಮೀನುಗಳಿಗೆ ರಕ್ಷಣಾ ಕವಚವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಪರಿಸರ ಸಮತೋಲನ ಕಾಯುವಲ್ಲಿ ಮಹತ್ತರ ಪಾತ್ರ ವಹಿಸುವ ಕಾಂಡ್ಲಾ ವನ ಇಂದು ಬಹುತೇಕವಾಗಿ ವಿನಾಶದ ಅಂಚಿನಲ್ಲಿದೆ. ಕಾಂಡ್ಲಾ ವನದ ಬಗ್ಗೆ ಹಾಗೂ ಅದರ ರಕ್ಷಣೆಯ ಬಗ್ಗೆ ಆಗೊಮ್ಮೆ ಈಗೊಮ್ಮೆ ಎಂಬಂತೆ ಮಾತುಗಳು ಕೇಳಿ ಬರುತ್ತಿದ್ದಾರೂ ಸಂಬಂಧಿಸಿ ಸೂಕ್ತವಾದ ಯಾವುದೇ ಯೋಜನೆಗಳಿರಲಿಲ್ಲ. ಇದೀಗ ಕೇಂದ್ರ ಸರಕಾರ ಅನುಮೋದನೆ ನೀಡಿರುವ ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆಯಡಿ ಕಾಂಡ್ಲಾ ವನಗಳ ಅಭಿವೃದ್ಧಿಯೂ ಆಗಲಿದೆ.

ಈ ಯೋಜನೆಗೆ ಸಂಬಂಧಿಸಿ ಶೀಘ್ರವೇ ಡಿಪಿಆರ್ ಸಿದ್ದವಾಗಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಅಘನಾಶಿನಿ, ಕಾಳಿ, ಶರಾವತಿ, ಕುಂದಾಪುರ, ಬೈಂದೂರು, ಬೈಕಂಪಾಡಿ ಸೇರಿದಂತೆ ಕರಾವಳಿಯ ಸುಮಾರು 7,000 ಹೆಕ್ಟೇರ್ ವ್ಯಾಪ್ತಿಯಲ್ಲಿ ಕಾಂಡ್ಲಾವನಗಳಿವೆ. 15 ಪಿಪಿಟಿಯಿಂದ 30 ಪಿಪಿಟಿವರೆಗೆ ಲವಣಾಂಶ ಇರುವಲ್ಲಿ ಮಾತ್ರ ಕಾಂಡ್ಲಾ ವನಗಳು ಬೆಳೆಯುತ್ತದೆ. ಆದರೆ, ಇಂತಹ ಕಾಂಡ್ಲಾವನಗಳ ವ್ಯಾಪ್ತಿಯ ನೀರು ಮಲಿನಗೊಂಡು ಕಾಂಡ್ಲಾಗಳಿಗೂ ಅಪಾಯ ಎದುರಾಗಿದೆ. ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆಯಡಿ ಕಾಂಡ್ಲಾ ವನಗಳ ಅಭಿವೃದ್ಧಿ ಸೇರಿದಂತೆ, ಕೈಗಾರಿಕೆಗಳಿಂದ ನದಿ-ಕಡಲಿಗೆ ಎದುರಾಗಿರುವ ಮಾಲಿನ್ಯ ತಡೆಗಟ್ಟುವುದು, ಮೀನುಗಾರರು-ಕಡಲ ತೀರ ಜನರ ಜೀವನ ಮಟ್ಟ ಸುಧಾರಣೆ ಹಾಗೂ ಈ ಕುರಿತಂತೆ ತರಬೇತಿ ಕೇಂದ್ರ ರಚನೆಯಾಗಲಿದೆ.

ಒಟ್ಟು 310 ಕೋ.ರೂ. ವೆಚ್ಚದಲ್ಲಿ ಜಾರಿ ಯಾಗುವ ಈ ಯೋಜನೆಗೆ ಶೇ.50ರಷ್ಟು ಮೊತ್ತ ವನ್ನು ವಿಶ್ವಬ್ಯಾಂಕ್ ಸಾಲದ ರೂಪದಲ್ಲಿ ನೀಡಲಿದೆ. ಶೇ.30ರಷ್ಟು ಕೇಂದ್ರ ಸರಕಾರ ಹಾಗೂ ಶೇ.20ರಷ್ಟು ರಾಜ್ಯ ಸರಕಾರ ಹಣ ನೀಡಲಿದೆ. ಯೋಜನೆ ಆರಂಭಗೊಂಡು 4 ವರ್ಷದ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯೂ ಇದೆ. ಗುಜರಾತ್, ಒಡಿಶಾ ಹಾಗೂ ಪಶ್ಚಿಮ ಬಂಗಾಲದಲ್ಲಿ ‘ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆ’ಯನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ 2010ರಲ್ಲಿ ಆರಂಭಿಸಿ, 2018ರಲ್ಲಿ ಪೂರ್ಣಗೊಳಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಕರ್ನಾಟಕ, ಕೇರಳ ಸೇರಿದಂತೆ ದೇಶದ 9 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಈ ಪೈಕಿ ಕರ್ನಾಟಕದಲ್ಲಿ (ದ.ಕ-ಉಡುಪಿ-ಉತ್ತರ ಕನ್ನಡ) ಜಾರಿಗೆ ಬರಲಿದೆ.

ಮಂಗಳೂರಿನಲ್ಲೇ ಕೇಂದ್ರ ಕಚೇರಿ: ರಾಜ್ಯದಲ್ಲಿ ಅನುಷ್ಠಾನಕ್ಕೆ ಬರುವ ಈ ಯೋಜನೆಯ ನಿರ್ವಹಣೆಗಾಗಿ ಪ್ರತ್ಯೇಕ ಕಚೇರಿ ಮಂಗಳೂರಿನಲ್ಲಿ ಕೆಲವೇ ದಿನದಲ್ಲಿ ಆರಂಭವಾಗಲಿದೆ. ‘ಮೂಡಾ’ ಕಚೇರಿಯಲ್ಲಿ ಈ ಕುರಿತಂತೆ ಕಚೇರಿ ಆರಂಭಿಸುವ ಸಾಧ್ಯತೆಯಿದೆ. ರಾಜ್ಯ ಪರಿಸರ ಹಾಗೂ ಜೀವಿಶಾಸ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಮೀನುಗಾರಿಕಾ ಇಲಾಖೆ, ಬಂದರು, ಅರಣ್ಯ, ಲೋಕೋಪಯೋಗಿ, ಪರಿಸರ, ಕೆಐಎಡಿಬಿ, ಸಂಶೋಧನಾ ಸಂಸ್ಥೆಗಳು, ತಜ್ಞರ ಒಳಗೊಳ್ಳುವಿಕೆಯ ಮೂಲಕ ಕಚೇರಿ ಕಾರ್ಯನಿರ್ವಹಿಸಲಿದೆ. ಪ್ರತ್ಯೇಕ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದ್ದಾರೆ. ನದಿಯು ಸಮುದ್ರ ಸೇರುವ ಸುಮಾರು 6ರಿಂದ 8 ಕಿ.ಮೀ.ವ್ಯಾಪ್ತಿಯಲ್ಲಿ ಕಾಂಡ್ಲಾ ವನ ಬೆಳೆಯುತ್ತದೆ. ಅಲೆಗಳು ಇಲ್ಲದ ಹಾಗೂ ದೊಡ್ಡ ಮೀನು ಬಾರದ ಹಿನ್ನೆಲೆಯಲ್ಲಿ ಕಾಂಡ್ಲಾ ಸಸ್ಯಗಳಿರುವಲ್ಲಿ ಮೀನುಗಳಿಗೆ ಸಂತೋನ್ಪತ್ತಿಗೆ ಸುರಕ್ಷಿತ ತಾಣ.


ಡ್ಲಾ ವನಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿ ಇಲಾಖೆಯು ರಾಜ್ಯ ಸರಕಾರದ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ 2018ರಲ್ಲಿ ಮಹಾರಾಷ್ಟ್ರದ ಮುಂಬೈಯಲ್ಲಿರುವ ಕಾಂಡ್ಲಾ ವನ ಕೇಂದ್ರದ ಅಧ್ಯಯನಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸಿತ್ತು. ತಂಡವು ಆಗಸ್ಟ್‌ನಲ್ಲಿ ಭೇಟಿ ನೀಡಿ ಅಧ್ಯಯನ ವರದಿಯನ್ನು ಅಕ್ಟೋಬರ್‌ನಲ್ಲಿ ಸರಕಾರಕ್ಕೆ ಕಳುಹಿಸಿತ್ತು. ಅದರಂತೆ ಸಮಗ್ರ ಕರಾವಳಿಯ ರಕ್ಷಣೆಗೆ ಸಂಬಂಧಿಸಿ ಕಾಂಡ್ಲಾ ವನ ಕೇಂದ್ರ ರಚನೆಯೊಂದಿಗೆ ಕರಾವಳಿ ತೀರ ಹಾಗೂ ಮೀನುಗಾರಿಕೆಗೆ ಸಂಬಂಧಿಸಿ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನೂ ರೂಪಿಸಲಾಗಿದೆ.

ಇದಕ್ಕಾಗಿ ಎಸಿಎಫ್, 2 ಆರ್‌ಎಫ್‌ಒಗಳು, 4 ಡೆಪ್ಯುಟಿ ಆಫ್‌ಎಫ್‌ಒಗಳು, 8 ಮಂದಿ ಫಾರೆಸ್ಟ್ ಗಾರ್ಡ್‌ಗಳು, 23 ಫಾರೆಸ್ಟ್ ವಾಚರ್ಸ್‌ಗಳ ಹುದ್ದೆಯೊಂದಿಗೆ ಕೇಂದ್ರ ಸ್ಥಾಪನೆಗೆ ರೂಪು ರೇಷೆಗಳನ್ನೂ ತಯಾರಿಸಲಾಗಿದೆ. ಇದೀಗ ಕೇಂದ್ರ ಸರಕಾರದಿಂದ ಸಮಗ್ರ ಕರಾವಳಿ ವಲಯ ನಿರ್ವಹಣಾ ಯೋಜನೆಗೆ ಅನುಮೋದನೆ ದೊರಕಿರುವುದು ಯೋಜನೆ ಶೀಘ್ರವೇ ಅನುಷ್ಠಾನಗೊಳ್ಳಲಿದೆ. ಮಂಗಳೂರಿನಲ್ಲಿ ಕೇಂದ್ರ ಕಚೇರಿಯೊಂದಿಗೆ ಕುಂದಾಪುರ ಕುಮಟಾಗಳಲ್ಲಿ ವಲಯ ಕಚೇರಿಗಳಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಂಡ್ಲಾ ವನ ಕೇಂದ್ರವನ್ನು ಮಂಗಳೂರಿನಲ್ಲಿ ಕಾಂಡ್ಲಾ ವನ ಅಧಿಕವಾಗಿರುವ ಪ್ರದೇಶದ ಸಮೀಪದಲ್ಲೇ ತೆರೆಯುವ ಸಾಧ್ಯತೆ ಇದೆ. 

-ಡಾ.ವೈ.ಕೆ.ದಿನೇಶ್ ಕುಮಾರ್,
ಪ್ರಾದೇಶಿಕ ನಿರ್ದೇಶಕರು, (ಪರಿಸರ) ಮಂಗಳೂರು


ಮುಖ್ಯವಾಗಿ ಏಡಿ ಹಾಗೂ ಸಿಗಡಿಯಂತಹ ಜಲಚರಗಳ ಸಂತಾನೋತ್ಪತ್ತಿಗೆ ಕಾಂಡ್ಲಾ ವನವಿರುವ ಪ್ರದೇಶ ಸೂಕ್ತ. ಈ ಪ್ರದೇಶದಲ್ಲಿ ಸಂಭವಿಸುವ ಪರಿಸರ ಸಂಬಂಧಿತ ಅಪಾಯಗಳಿಗೆ ಇದು ತಡೆಗೋಡೆಯಾಗಿದೆ.

- ಮಹೇಶ್ ಕುಮಾರ್, ಮೀನುಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News