ಸಂಸ್ಕೃತದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಉತ್ತರಪ್ರದೇಶ ಸರಕಾರ

Update: 2019-06-18 15:03 GMT

ಲಕ್ನೊ, ಜೂ. 18: ಸಂಸ್ಕೃತವನ್ನು ಪ್ರಚಾರ ಮಾಡುವ ಪ್ರಯತ್ನವಾಗಿ ಉತ್ತರಪ್ರದೇಶ ಸರಕಾರ ಈಗ ಹಿಂದಿ, ಇಂಗ್ಲೀಷ್ ಹಾಗೂ ಉರ್ದುವಿನೊಂದಿಗೆ ಸಂಸ್ಕೃತದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಮೊದಲ ಸಂಸ್ಕೃತ ಪತ್ರಿಕಾ ಹೇಳಿಕೆಯನ್ನು ರಾಜ್ಯ ಸರಕಾರದ ಮಾಹಿತಿ ಇಲಾಖೆ ಸೋಮವಾರ ಬಿಡುಗಡೆಗೊಳಿಸಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರ ಪ್ರಮುಖ ಭಾಷಣ ಹಾಗೂ ಸರಕಾರದ ಮಾಹಿತಿಯನ್ನು ಹಿಂದಿ, ಇಂಗ್ಲೀಷ್ ಹಾಗೂ ಉರ್ದುವಿನೊಂದಿಗೆ ಸಂಸ್ಕೃತದಲ್ಲಿ ಕೂಡ ಬಿಡುಗಡೆಗೊಳಿಸಲಾಗುವುದು ಎಂದು ಮಾಹಿತಿ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಭಾಷಣಗಳನ್ನು ಸಂಸ್ಕೃತಕ್ಕೆ ಭಾಷಾಂತರಗೊಳಿಸಲು ಲಕ್ನೋ ಮೂಲದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ನೆರವು ತೆಗೆದುಕೊಳ್ಳಲು ಇಲಾಖೆ ನಿರ್ಧರಿಸಿದೆ.

‘‘ಇದು ಇಲಾಖೆ ತೆಗೆದುಕೊಳ್ಳುತ್ತಿರುವ ಮೊದಲ ಹೆಜ್ಜೆ. ಹೊಸದಿಲ್ಲಿಯಲ್ಲಿ ನೀತಿ ಆಯೋಗದ ಸಭೆಯಲ್ಲಿ ಆದಿತ್ಯಾನಾಥ್ ಅವರು ಈ ಹಿಂದೆ ಮಾಡಿದ ಭಾಷಣವನ್ನು ಇತರ ಭಾಷೆಗಳೊಂದಿಗೆ ಸಂಸ್ಕೃತದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಇದನ್ನು ವಿಸ್ತರಿಸಲು ನಾವು ಯೋಜಿಸಿದ್ದೇವೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್, ಸಂಸ್ಕೃತ ದೇಶದ ಡಿಎನ್‌ಎ ಎಂದು ಹೇಳಿದ್ದರು. ‘‘ಸಂಸ್ಕೃತ ಭಾರತದ ಡಿಎನ್‌ಎಯಲ್ಲಿ ಇದೆ. ಈಗ ಸಂಸ್ಕೃತವನ್ನು ಪುರೋಹಿತರು ಮಾತ್ರ ಬಳಸುತ್ತಿದ್ದಾರೆ’’ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News