ಈ ದೇಶಗಳಲ್ಲಿ ಜನನಕ್ಕಿಂತ ಸಾವಿನ ದರವೇ ಅಧಿಕ!

Update: 2019-06-18 15:18 GMT

ವಿಶ್ವಸಂಸ್ಥೆ, ಜೂ. 18: ಜಗತ್ತಿನ ಜನಸಂಖ್ಯೆಯು ಇಂದಿನ 770 ಕೋಟಿಯಿಂದ 2050ರ ವೇಳೆಗೆ 970 ಕೋಟಿಗೆ ಏರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಸೋಮವಾರ ಬಿಡುಗಡೆಗೊಂಡ ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ. ಈ ಅವಧಿಯಲ್ಲಿ ಉಪ ಸಹಾರಾ ಆಫ್ರಿಕ (ಆಫ್ರಿಕ ಖಂಡದಲ್ಲಿ ಸಹಾರ ಮರುಭೂಮಿಯ ದಕ್ಷಿಣಕ್ಕಿರುವ ದೇಶಗಳು) ಜನಸಂಖ್ಯೆ ದುಪ್ಪಟ್ಟಾಗುತ್ತದೆ ಎಂಬುದಾಗಿಯೂ ಅದು ಹೇಳಿದೆ.

ಅದೇ ವೇಳೆ, 2100ರ ವೇಳೆಗೆ ಜಾಗತಿಕ ಜನಸಂಖ್ಯೆಯು 1,100 ಕೋಟಿಯನ್ನು ತಲುಪುತ್ತದೆ ಎಂಬುದಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ‘ಜಾಗತಿಕ ಜನಸಂಖ್ಯೆ ನಿರೀಕ್ಷೆಗಳು’ ಎಂಬ ಹೆಸರಿನ ವರದಿ ಹೇಳಿದೆ.

ಕೆಲವು ದೇಶಗಳಲ್ಲಿ ಜನರ ಜೀವಿತಾವಧಿ ಹೆಚ್ಚಳವಾಗಿರುವುದರಿಂದ ಅವುಗಳ ಜನಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಅದೇ ವೇಳೆ, ಜಾಗತಿಕ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಇಳಿಕೆಯಾಗಲಿದೆ.

2050ರ ವೇಳೆಗೆ, ಜಾಗತಿಕ ಜನಸಂಖ್ಯಾ ಬೆಳವಣಿಗೆಯ ಅರ್ಧಕ್ಕೂ ಹೆಚ್ಚು ಭಾಗ ಕೇವಲ ಒಂಬತ್ತು ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ. ಆ ದೇಶಗಳೆಂದರೆ: ಭಾರತ, ನೈಜೀರಿಯ, ಪಾಕಿಸ್ತಾನ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಇಥಿಯೋಪಿಯ, ತಾಂಝಾನಿಯ, ಇಂಡೋನೇಶ್ಯ, ಈಜಿಪ್ಟ್ ಮತ್ತು ಅಮೆರಿಕ.

2018ರಲ್ಲಿ ಜಗತ್ತಿನ ಜನಸಂಖ್ಯೆಯಲ್ಲಿ 8.2 ಕೋಟಿ ಏರಿಕೆಯಾಗಿದೆ.

ಈ ದೇಶಗಳಲ್ಲಿ ಜನನಕ್ಕಿಂತ ಸಾವಿನ ದರವೇ ಅಧಿಕ!

27 ದೇಶಗಳು ಅಥವಾ ಭೂಭಾಗಗಳ ಜನಸಂಖ್ಯೆಯಲ್ಲಿ 2010ರ ಬಳಿಕ ಕನಿಷ್ಠ ಒಂದು ಶೇಕಡದಷ್ಟು ಕಡಿತವಾಗಿದೆ.

ಬೆಲಾರುಸ್, ಎಸ್ಟೋನಿಯ, ಜರ್ಮನಿ, ಹಂಗೇರಿ, ಇಟಲಿ, ಜಪಾನ್, ರಶ್ಯ, ಸರ್ಬಿಯ ಮತ್ತು ಯುಕ್ರೇನ್‌ಗಳಲ್ಲಿ ಜನನಕ್ಕಿಂತ ಸಾವಿನ ದರ ಅಧಿಕವಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಆದರೆ, ಈ ಜನಸಂಖ್ಯಾ ನಷ್ಟವನ್ನು ವಲಸಿಗರು ತುಂಬಲಿದ್ದಾರೆ.

ಜಾಗತಿಕ ಜನನ ದರದಲ್ಲಿ ಕುಸಿತ

ಒಟ್ಟಾರೆ ಜಾಗತಿಕ ಜನನ ದರವು ಪ್ರತಿ ಮಹಿಳೆಗೆ 1990ರಲ್ಲಿದ್ದ 3.2 ರಿಂದ 2019ರಲ್ಲಿ 2.5ಕ್ಕೆ ಕುಸಿದಿದೆ. ಅದು 2050ರ ವೇಳೆಗೆ, ಇನ್ನಷ್ಟು, ಅಂದರೆ 2.2ಕ್ಕೆ ಕುಸಿಯುವುದೆಂದು ನಿರೀಕ್ಷಿಸಲಾಗಿದೆ.

ಇದು ತಲೆಮಾರುಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಹಾಗೂ ದೀರ್ಘಾವಧಿಯಲ್ಲಿ ಜನಸಂಖ್ಯಾ ಕುಸಿತವನ್ನು ನಿವಾರಿಸುವುದಕ್ಕಾಗಿ ಅಗತ್ಯವಿರುವ ಕನಿಷ್ಠ 2.1 ಜನನ ದರಕ್ಕೆ ಸಮೀಪವಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಆದರೆ, ಇಲ್ಲಿ ವಲಸೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ.

ಜೀವಿತಾವಧಿಯಲ್ಲಿ ಹೆಚ್ಚಳ

ಬಡ ದೇಶಗಳು ಸೇರಿದಂತೆ, ಜಗತ್ತಿನಲ್ಲಿ ಜೀವಿತಾವಧಿಯಲ್ಲಿ ಹೆಚ್ಚಳವಾಗಲಿದೆ ಎಂಬುದಾಗಿಯೂ ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಪ್ರಸಕ್ತ ಬಡ ದೇಶಗಳ ಜೀವಿತಾವಧಿಯು ಜಾಗತಿಕ ಸರಾಸರಿಗಿಂತ 7 ವರ್ಷಗಳಷ್ಟು ಕಡಿಮೆಯಿದೆ.

ಜಾಗತಿಕ ಸರಾಸರಿ ಜೀವಿತಾವಧಿಯು ಪ್ರಸಕ್ತ 72.6 ವರ್ಷಗಳಾಗಿದ್ದು, 2050ರ ವೇಳೆಗೆ ಅದು 77.1 ವರ್ಷಗಳನ್ನು ತಲುಪಲಿದೆ ಎಂದು ವರದಿ ಹೇಳಿದೆ.

1990ರಲ್ಲಿ ಸರಾಸರಿ ಜೀವಿತಾವಧಿಯು 64.2 ವರ್ಷಗಳಾಗಿದ್ದವು.

ಚೀನಾದ ಜನಸಂಖ್ಯೆಯಲ್ಲಿ ಇಳಿಕೆ

ಅದೇ ವೇಳೆ, ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯಾ ಭರಿತ ದೇಶವಾಗಿರುವ ಚೀನಾದ ಜನಸಂಖ್ಯೆಯು 2019 ಮತ್ತು 2050ರ ನಡುವಿನ ಅವಧಿಯಲ್ಲಿ 2.2 ಶೇಕಡದಷ್ಟು ಇಳಿಕೆ ಕಾಣಲಿದೆ. ಅಂದರೆ, ಅದರ ಜನಸಂಖ್ಯೆಯಲ್ಲಿ 3.14 ಕೋಟಿಯಷ್ಟು ಕಡಿತವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News