ಅಮೆರಿಕ: ಪತ್ನಿ, ಮಕ್ಕಳನ್ನು ಗುಂಡು ಹಾರಿಸಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಭಾರತೀಯ

Update: 2019-06-18 15:26 GMT

 ವಾಶಿಂಗ್ಟನ್, ಜೂ. 18: ಅಮೆರಿಕದ ಅಯೋವ ರಾಜ್ಯದಲ್ಲಿ 44 ವರ್ಷದ ಭಾರತೀಯ ಅಮೆರಿಕನ್ ಮಾಹಿತಿ ತಂತ್ರಜ್ಞಾನ ಉದ್ಯೋಗಿಯೋರ್ವ ತನ್ನ ಪತ್ನಿ ಮತ್ತು ಇಬ್ಬರು ಪುತ್ರರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 ಈ ಸಾವುಗಳ ಬಗ್ಗೆ ತನಿಖೆ ನಡೆಸುತ್ತಿರುವ ವೆಸ್ಟ್ ಡೆಸ್ ಮೊಯಿನ್ಸ್ ಪೊಲೀಸ್ ಇಲಾಖೆಯು, ವಿಧಿವಿಜ್ಞಾನ ಪರೀಕ್ಷೆ ಮತ್ತು ಶವಪರೀಕ್ಷೆಗಳನ್ನು ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದೆ.

ಚಂದ್ರಶೇಖರ ಸುಂಕಾರ, ಅವರ ಪತ್ನಿ 41 ವರ್ಷದ ಲಾವಣ್ಯ ಸುಂಕಾರ ಹಾಗೂ ಅವರ 15 ಮತ್ತು 10 ವರ್ಷಗಳ ಇಬ್ಬರು ಪುತ್ರರ ಮೃತದೇಹಗಳು ಅವರ ಮನೆಯಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿದ್ದವು. ಮೃತದೇಹಗಳಲ್ಲಿ ಗುಂಡಿನ ಗಾಯಗಳಿದ್ದವು.

ಈ ಸಂದರ್ಭದಲ್ಲಿ ಇಬ್ಬರು ವಯಸ್ಕರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಇತರ ಕುಟುಂಬ ಸದಸ್ಯರು ಅದೇ ಮನೆಯಲ್ಲಿ ಇದ್ದರು.

‘‘ಲಾವಣ್ಯ ಸುಂಕಾರ ಮತ್ತು ಇಬ್ಬರ ಬಾಲಕರ ಸಾವುಗಳು ಹತ್ಯೆಗಳಾಗಿವೆ. ಚಂದ್ರಶೇಖರ ಸುಂಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಚಂದ್ರಶೇಖರ ಸುಂಕಾರ ಅವರ ಈ ಕಠಿಣ ನಿರ್ಧಾರಕ್ಕೆ ಕಾರಣ ತಿಳಿದುಬಂದಿಲ್ಲ.

‘‘ಎಲ್ಲ ನಾಲ್ವರು ಕುಟುಂಬ ಸದಸ್ಯರು ಗುಂಡೇಟಿನಿಂದ ಸತ್ತಿದ್ದಾರೆ ಎಂಬುದಾಗಿ ರಾಜ್ಯ ವೈದ್ಯಕೀಯ ತಪಾಸಕರ ಕಚೇರಿ ನಿರ್ಧರಿಸಿದೆ’’ ಎಂದು ಹೇಳಿಕೆ ತಿಳಿಸಿದೆ.

ಚಂದ್ರಶೇಖರ್ ಆಂಧ್ರಪ್ರದೇಶದವರಾಗಿದ್ದಾರೆ. ಅವರು ಅಯೋವ ಸಾರ್ವಜನಿಕ ಸುರಕ್ಷತೆ ಇಲಾಖೆಯ ಟೆಕ್ನಾಲಜಿ ಸರ್ವಿಸಸ್ ಬ್ಯೂರೋದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News