ಅನಿಲ್ ಅಂಬಾನಿಯ ಕಂಪೆನಿಯಿಂದ 14,600 ಕೋಟಿ ರೂ.ಗೆ ಬೇಡಿಕೆಯಿಟ್ಟ ಚೀನಾ ಬ್ಯಾಂಕ್‌ಗಳು

Update: 2019-06-18 15:30 GMT

ಬೀಜಿಂಗ್, ಜೂ. 18: ಈ ವರ್ಷದ ಆದಿ ಭಾಗದಲ್ಲಿ ದಿವಾಳಿಯಾಗಿರುವ ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯುನಿಕೇಶನ್ಸ್ ಲಿಮಿಟೆಡ್ ತಮಗೆ ಕನಿಷ್ಠ 2.1 ಬಿಲಿಯ ಡಾಲರ್ (ಸುಮಾರು 14,600 ಕೋಟಿ ರೂಪಾಯಿ) ನೀಡಬೇಕೆಂದು ಚೀನಾದ ಬ್ಯಾಂಕ್‌ಗಳಾದ ಚೀನಾ ಡೆವೆಲಪ್‌ಮೆಂಟ್ ಬ್ಯಾಂಕ್, ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಶಿಯಲ್ ಬ್ಯಾಂಕ್ ಆಫ್ ಚೀನಾ ಮತ್ತು ಎಕ್ಸಿಮ್ ಬ್ಯಾಂಕ್ ಆಫ್ ಚೀನಾ ಬೇಡಿಕೆ ಸಲ್ಲಿಸಿವೆ.

ಚೀನಾದ ಸರಕಾರಿ ಒಡೆತನದ ಚೀನಾ ಡೆವೆಲಪ್‌ಮೆಂಟ್ ಬ್ಯಾಂಕ್ ಅಂಬಾನಿಯ ಟೆಲಿಕಾಂ ಕಂಪೆನಿಗೆ 9,860 ಕೋಟಿ ರೂಪಾಯಿ ಮೊತ್ತದ ಸಾಲಗಳನ್ನು ನೀಡಿದ್ದು, ಅತಿ ಹೆಚ್ಚು ಸಾಲ ಕೊಟ್ಟಿರುವ ಬ್ಯಾಂಕ್ ಆಗಿದೆ. ರಿಲಯನ್ಸ್ ಕಮ್ಯುನಿಕೇಶನ್ಸ್ ಲಿಮಿಟೆಟ್ ಶೇರು ವಿನಿಮಯ ಸಂಸ್ಥೆಗಳಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಅದೇ ವೇಳೆ, ಎಕ್ಸಿಮ್ ಬ್ಯಾಂಕ್ ಆಫ್ ಚೀನಾ 3,360 ಕೋಟಿ ರೂಪಾಯಿ ಪಾವತಿಗೆ ಬೇಡಿಕೆ ಸಲ್ಲಿಸಿದರೆ, ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಶಿಯಲ್ ಬ್ಯಾಂಕ್ ಆಫ್ ಚೀನಾ 1,554 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ.

ಭಾರತದ ದಿವಾಳಿ ನ್ಯಾಯಾಲಯವು ಸಾಲ ನೀಡಿದವರು ಮತ್ತು ಟೆಲಿಕಾಮ್ ಸಂಸ್ಥೆಯ ವಿಚಾರಣೆ ನಡೆಸುತ್ತಿದೆ. ಕಂಪೆನಿಯ ಸೊತ್ತುಗಳನ್ನು ಮಾರಿ ಸಾಲ ಮರುಪಾವತಿಸುವುದಕ್ಕಾಗಿ ನ್ಯಾಯಾಲಯವು ಖರೀದಿದಾರರನ್ನು ಹುಡುಕುತ್ತಿದೆ.

ಅನಿಲ್ ಅಂಬಾನಿಯ ಸಹೋದರ ಹಾಗೂ ಏಶ್ಯದ ಅತಿ ಸಿರಿವಂತ ಮುಕೇಶ್ ಅಂಬಾನಿಯ ರಿಲಯನ್ಸ್ ಜಿಯೋ ಇನ್ಫೊಕಾಮ್ ಲಿಮಿಟೆಡ್ ಆರ್‌ಕಾಮ್‌ನ ಸೊತ್ತುಗಳನ್ನು 17,300 ಕೋಟಿ ರೂ.ಗೆ ಖರೀದಿಸುವ ಪ್ರಸ್ತಾವವನ್ನು ಈ ಮೊದಲು ಮುಂದಿಟ್ಟಿತ್ತು. ಈ ವ್ಯವಹಾರ ಕುದುರಿದ್ದರೆ ಸಾಲಗಾರರ ಹಣವನ್ನು ಆಂಶಿಕವಾಗಿ ಪಾವತಿಸಬಹುದಾಗಿತ್ತು. ಆದರೆ, ನಿಯಂತ್ರಣ ಸಂಸ್ಥೆಗಳ ತೊಡಕಿನಿಂದಾಗಿ ಆ ವ್ಯವಹಾರ ಮುರಿದುಬಿತ್ತು.

ದಿವಾಳಿ ಕಾಯ್ದೆಯಡಿಯಲ್ಲಿ 57,382 ಕೋಟಿ ರೂಪಾಯಿ ಪಾವಿಸುವಂತೆ ಕೋರಿರುವ ಹಣಕಾಸು ಸಂಸ್ಥೆಗಳ ಪಟ್ಟಿಯನ್ನು ರಿಲಯನ್ಸ್ ಕಮ್ಯನಿಕೇಶನ್ಸ್ ಸೋಮವಾರ ಬಿಡುಗಡೆ ಮಾಡಿದೆ.

ಅನಿಲ್ ಅಂಬಾನಿಯ ಆರ್‌ಕಾಮ್‌ಗೆ 2013 ಜೂನ್‌ವರೆಗೆ ಸಾಲ ನೀಡಿದ 7 ಅತಿ ದೊಡ್ಡ ಸಾಲದಾತ ಸಂಸ್ಥೆಗಳ ವಿವರ ಇಲ್ಲಿದೆ.

1. ಚೀನಾ ಡೆವೆಲಪ್‌ಮೆಂಟ್ ಬ್ಯಾಂಕ್ (ಸಾಲದ ಮೊತ್ತ 9,860 ಕೋಟಿ ರೂಪಾಯಿ)

2. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (4,910 ಕೋಟಿ ರೂಪಾಯಿ)

3. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) (4,760 ಕೋಟಿ ರೂ.)

4. ಎಕ್ಸಿಮ್ ಬ್ಯಾಂಕ್ ಆಫ್ ಚೀನಾ (3,360 ಕೋಟಿ ರೂ.)

5. ಬ್ಯಾಂಕ್ ಆಫ್ ಬರೋಡ (2,700 ಕೋಟಿ ರೂಪಾಯಿ)

6. ಮ್ಯಾಡಿಸನ್ ಪೆಸಿಫಿಕ್ ಟ್ರಸ್ಟ್ (2,350 ಕೋಟಿ ರೂಪಾಯಿ)

7. ಆ್ಯಕ್ಸಿಸ್ ಬ್ಯಾಂಕ್ (2,090 ಕೋಟಿ ರೂಪಾಯಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News