ಜಮ್ಮು ಕಾಶ್ಮೀರ ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ಎಸೆದ ಉಗ್ರರು: ಮೂವರಿಗೆ ಗಾಯ

Update: 2019-06-18 15:31 GMT
ಫೋಟೊ ಕೃಪೆ: ANI

ಪುಲ್ವಾಮಾ, ಜು. 18: ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿರುವ ಪೊಲೀಸ್ ಠಾಣೆ ಮೇಲೆ ಮಂಗಳವಾರ ಸಂಜೆ ಉಗ್ರರು ಎಸೆದ ಗ್ರೆನೇಡ್ ಜನನಿಬಿಡ ರಸ್ತೆಯ ಹೊರಭಾಗದಲ್ಲಿ ಸ್ಫೋಟಗೊಂಡ ಪರಿಣಾಮ ಮೂವರು ನಾಗರಿಕರು ಗಂಭೀರ ಗಾಯಗೊಂಡಿದ್ದಾರೆ.

ಕೆಲವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಗಾಯಗೊಂಡ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟ ಸಂಭವಿಸಿದ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೇನಾ ವಾಹನ ಗುರಿಯಾಗಿರಿಸಿ ಸ್ಫೋಟ ನಡೆಸಿ ಇಬ್ಬರು ಯೋಧರು ಹಾಗೂ ಇತರ 16 ಮಂದಿ ಗಾಯಗೊಳ್ಳಲು ಕಾರಣವಾದ ಘಟನೆಯ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.

ಪುಲ್ವಾಮದ ಅಹಿಹಾಲ್ ಗ್ರಾಮದ ಸಮೀಪ ನಡೆಸಿದ ಐಇಡಿ ಸ್ಫೋಟದಿಂದ 44 ರಾಷ್ಟ್ರೀಯ ರೈಪಲ್ಸ್‌ನ ವಾಹನ ಸಂಪೂರ್ಣ ಜಖಂಗೊಂಡಿತ್ತು. ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕಳೆದ ವಾರ ಪಾಕಿಸ್ತಾನ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಮಾಹಿತಿ ನೀಡಿತ್ತು. ಈ ಮಾಹಿತಿಯನ್ನು ಅಮೆರಿಕದೊಂದಿಗೆ ಕೂಡ ಹಂಚಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News