×
Ad

ಮಧ್ಯಪ್ರಾಚ್ಯಕ್ಕೆ 1000 ಹೆಚ್ಚುವರಿ ಸೈನಿಕರು

Update: 2019-06-18 21:25 IST

ವಾಶಿಂಗ್ಟನ್, ಜೂ. 18: ‘ಇರಾನ್ ಸೇನೆ ಮತ್ತು ಅದರ ಪರವಾಗಿ ಕೆಲಸ ಮಾಡುವ ಗುಂಪುಗಳ ಪ್ರತಿಕೂಲ ನಡವಳಿಕೆ’ಯನ್ನು ಎದುರಿಸಲು, ಮಧ್ಯ ಪ್ರಾಚ್ಯಕ್ಕೆ 1,000 ಹೆಚ್ಚುವರಿ ಸೈನಿಕರನ್ನು ಕಳುಹಿಸಲು ಅಮೆರಿಕ ನಿರ್ಧರಿಸಿದೆ ಎಂದು ಅಮೆರಿಕದ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನಹನ್ ಸೋಮವಾರ ಪ್ರಕಟಿಸಿದ್ದಾರೆ.

‘‘ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ವಾಯು, ನೌಕಾ ಮತ್ತು ಭೂ ಆಧಾರಿತ ಬೆದರಿಕೆಗಳನ್ನು ಎದುರಿಸಲು, ರಕ್ಷಣಾ ಉದ್ದೇಶಕ್ಕಾಗಿ 1,000 ಹೆಚ್ಚುವರಿ ಸೈನಿಕರನ್ನು ಕಳುಹಿಸಲು ನಾನು ಆದೇಶ ನೀಡಿದ್ದೇನೆ’’ ಎಂದು ಅಮೆರಿಕದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಶಾನಹನ್ ತಿಳಿಸಿದ್ದಾರೆ.

ಕಳೆದ ವಾರ ಒಮಾನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಯ ಬಳಿಕ ವಲಯದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಯಲ್ಲಿ ಇರಾನ್ ಕೈವಾಡವಿದೆ ಎಂದು ಅಮೆರಿಕ ಆರೋಪಿಸಿದೆ.

ಇದು ಮೇ ತಿಂಗಳಲ್ಲಿ ತೈಲ ಟ್ಯಾಂಕರ್‌ಗಳ ಮೇಲೆ ದಾಳಿಗಳು ನಡೆದ ಬಳಿಕ ಅಮೆರಿಕ ಘೋಷಿಸಿದ 1,500 ಸೈನಿಕರ ನಿಯೋಜನೆಗೆ ಹೆಚ್ಚುವರಿಯಾಗಿರುತ್ತದೆ. ಮೇ ತಿಂಗಳಲ್ಲಿ ನಡೆದ ದಾಳಿಯ ಹೊಣೆಯನ್ನೂ ಅಮೆರಿಕ ಇರಾನ್ ಮೇಲೆ ಹೊರಿಸಿರುವುದನ್ನು ಸ್ಮರಿಸಬಹುದಾಗಿದೆ.

ಅಮೆರಿಕದ ಈ ಕ್ರಮವು ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ. ಆದರೆ, ‘ಇರಾನ್‌ನೊಂದಿಗೆ ಸಂಘರ್ಷವನ್ನು ಅಮೆರಿಕ ಬಯಸುವುದಿಲ್ಲ’ ಎಂಬುದಾಗಿ ಶಾನಹನ್ ಹೇಳಿಕೊಂಡಿದ್ದಾರೆ.

‘ದಾಳಿಯಲ್ಲಿ ಇರಾನ್ ಕೈವಾಡವನ್ನು ಸೂಚಿಸುವ’ ಹೊಸ ಚಿತ್ರ ಬಿಡುಗಡೆ

ಒಮಾನ್ ಕೊಲ್ಲಿಯಲ್ಲಿ ಕಳೆದ ವಾರ ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಗಳಿಗೆ ಸಂಬಂಧಿಸಿ ಅಮೆರಿಕದ ಸೇನೆ ಸೋಮವಾರ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಿದೆ ಹಾಗೂ ಈ ಚಿತ್ರಗಳು ದಾಳಿಯಲ್ಲಿ ಇರಾನ್‌ನ ಕೈವಾಡವನ್ನು ಸಾಬೀತುಪಡಿಸುತ್ತವೆ ಎಂದು ಹೇಳಿದೆ.

ಒಂದು ಚಿತ್ರವು, ದಾಳಿಗೊಳಗಾದ ಟ್ಯಾಂಕರ್‌ಗಳ ಪೈಕಿ ಒಂದರಲ್ಲಿ ಇರಿಸಲಾಗಿರುವ ‘‘ಸ್ಫೋಟಗೊಳ್ಳದ ಲಿಂಪೆಟ್ ಬಾಂಬ್‌ನ ಮ್ಯಾಗ್ನೆಟಿಕ್ ಅಟ್ಯಾಚ್‌ಮೆಂಟ್ ಸಾಧನದ ಅವಶೇಷಗಳನ್ನು ತೋರಿಸುತ್ತದೆ ಎಂಬುದಾಗಿ ಅಮೆರಿಕದ ರಕ್ಷಣ ಇಲಾಖೆ ಪೆಂಟಗನ್ ಹೇಳಿದೆ.

ಇರಾನ್‌ನ ಗಸ್ತು ದೋಣಿಯೊಂದು ಬಾಂಬನ್ನು ತೆರವುಗೊಳಿಸಿದೆ ಎಂದು ಅಮೆರಿಕ ಹೇಳಿದೆ.

‘‘ವೀಡಿಯೊ ಪುರಾವೆ ಆಧಾರದಲ್ಲಿ ಹಾಗೂ ಸ್ಫೋಟಗೊಳ್ಳದ ಲಿಂಪೆಟ್ ಬಾಂಬನ್ನು ಕ್ಷಿಪ್ರವಾಗಿ ತೆರವುಗೊಳಿಸಲು ಅಗತ್ಯವಾದ ಸಂಪನ್ಮೂಲಗಳು ಮತ್ತು ನೈಪುಣ್ಯತೆ ಆಧಾರದಲ್ಲಿ, ದಾಳಿಗೆ ಜವಾಬ್ದಾರಿ ಇರಾನ್ ಎಂಬ ನಿರ್ಧಾರಕ್ಕೆ ಬರಲಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ಪೆಂಟಗನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News