ಮೂರು ತಿಂಗಳೊಳಗೆ 94 ಸಿ-94 ಸಿಸಿ ಅರ್ಜಿಗಳ ವಿಲೇವಾರಿ : ಸಚಿವ ದೇಶಪಾಂಡೆ

Update: 2019-06-18 17:14 GMT

ಮಂಗಳೂರು, ಜೂ.18: ಸರಕಾರಿ ಭೂಮಿಯಲ್ಲಿ ಮನೆ ಮಾಡಿಕೊಂಡಿರುವವರ ಮನೆಗಳ ಸಕ್ರಮಕ್ಕೆ ಜಾರಿಗೊಳಿಸಲಾಗಿರುವ 94 ಸಿ ಮತ್ತು 94 ಸಿಸಿ ಅರ್ಜಿಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸೂಚಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.
94ಸಿ (ಗ್ರಾಮಾಂತರ)ಗೆ ಸಂಬಂಧಿಸಿದಂತೆ ಸ್ವೀಕರಿಸಲಾದ 1,07,190 ಅರ್ಜಿಗಳ ಪೈಕಿ 45,853 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ. 51,209 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 10,128 ಅರ್ಜಿಗಳ ವಿಲೇವಾರಿ ಬಾಕಿ ಇದೆ. 45,012 ಹಕ್ಕುಪತ್ರ ನೀಡಲಾಗಿದೆ. ಅದಲ್ಲದೆ 94ಸಿಸಿ (ನಗರ)ಗೆ ಸಂಬಂಧಿಸಿದಂತೆ ಸ್ವೀಕರಿಸಲಾದ 40,245 ಅರ್ಜಿಗಳ ಪೈಕಿ 23,719 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ. 11,002 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 5,524 ಅರ್ಜಿಗಳ ವಿಲೇವಾರಿ ಬಾಕಿ ಇದೆ. 23,038 ಹಕ್ಕುಪತ್ರ ನೀಡಲಾಗಿದೆ. 681 ಹಕ್ಕುಪತ್ರ ನೀಡಲು ಬಾಕಿ ಇದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್.ವಿ.ದೇಶಪಾಂಡೆ ನಗರ ಮತ್ತು ಗ್ರಾಮಾಂತರ ಪ್ರದೇಶದ ಅರ್ಜಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರರು ಮುತುವರ್ಜಿ ವಹಿಸಬೇಕು. ಯಾವ ಕಾರಣಕ್ಕೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂಬುದನ್ನು ತಿಳಿದುಕೊಂಡು ಅರ್ಹರಿಗೆ ಅವುಗಳ ಪ್ರಯೋಜನ ಸಿಗುವಂತೆ ಮಾಡಬೇಕು. ಹಕ್ಕುಪತ್ರ ನೀಡಲು ಶಾಸಕರು ಸಿಗುವ ಸಮಯ ನೋಡಿ ಕಾಲಹರಣ ಮಾಡಬೇಡಿ. ಸಲ್ಲಿಸಲ್ಪಟ್ಟ ಅರ್ಜಿಗಳು ಸಮರ್ಪಕವಾಗಿದೆ ಎಂಬುದು ಖಾತ್ರಿಯಾದೊಡನೆ ಸಂಬಂಧಪಟ್ಟವರಿಗೆ ಹಕ್ಕುಪತ್ರ ವಿತರಿಸಿ ಎಂದರಲ್ಲದೆ, ಎಲ್ಲಾ ಅರ್ಜಿಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಿ ಎಂದು ಸೂಚಿಸಿದರು.

ಸಕಾಲ ಅರ್ಜಿಗಳ ವಿಳಂಬ ಬೇಡ: ಜಿಲ್ಲೆಯಲ್ಲಿ 40,260 ಸಕಾಲ ಅರ್ಜಿಗಳ ಪೈಕಿ 38,167 ಅರ್ಜಿಗಳ ವಿಲೇ ಮಾಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಯಿಂದ ಪಡೆದುಕೊಂಡ ಸಚಿವರು ಮಾಹಿತಿ ಕೋರಿ ‘ಸಕಾಲ’ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಕೂಡ ಸಕಾಲಕ್ಕೆ ಇತ್ಯರ್ಥಗೊಳಿಸಿರಿ. ಅದರಲ್ಲಿ ವಿಳಂಬ ಮಾಡಿದರೆ ಸಾರ್ವಜನಿಕರಿಗೆ ಈ ಬಗ್ಗೆ ಇರುವ ವಿಶ್ವಾಸವೂ ಕಡಿಮೆಯಾದೀತು ಎಂದರು.

ಭವಿಷ್ಯದಲ್ಲಿ ನೀರಿನ ಸಮಸ್ಯೆ ಇರದಂತೆ ನೋಡಿಕೊಳ್ಳಿ: ಈ ವರ್ಷ ನಗರ ಸಹಿತ ಜಿಲ್ಲೆಯ ಹಲವು ಕಡೆ ನೀರಿನ ಅಭಾವದಿಂದ ಜನರಿಗೆ ಭಾರೀ ಸಮಸ್ಯೆಯಾಗಿರುವುದನ್ನು ತಿಳಿದುಕೊಂಡಿದ್ದೇನೆ. ಭವಿಷ್ಯದಲ್ಲಿ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ತುಂಬೆ ವೆಂಟೆಡ್ ಡ್ಯಾಮನ್ನು 7 ಮೀ. ಎತ್ತರಕ್ಕೇರಿಸಲು ಕ್ರಮ ಜರುಗಿಸಲಾಗುವುದು ಎಂದು ಸಚಿವ ದೇಶಪಾಂಡೆ ನುಡಿದರಲ್ಲದೆ, ಕುಡಿಯುವ ನೀರನ್ನು ಟ್ಯಾಂಕರ್‌ನಲ್ಲಿ ಪೂರೈಕೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಯ ಬದಲು ತಹಶೀಲ್ದಾರ್‌ಗೆ ನೀಡುವ ಅಗತ್ಯವೂ ಇದೆ ಎಂದರು.

ಜಿಲ್ಲೆಯ ನೇತ್ರಾವತಿ, ಕುಮಾರಧಾರ, ಪಯಸ್ವಿನಿ ನದಿಗೆ ಚೆಕ್ ಡ್ಯಾಂ ನಿರ್ಮಿಸಿ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಮುಂದಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಸಲಹೆ ನೀಡಿದರು.

ಕೊಳೆ ರೋಗದ ಪರಿಹಾರ ಬಂದಿಲ್ಲ: ಅಡಿಕೆ ಕೊಳೆರೋಗಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಇನ್ನೂ ಪರಿಹಾರ ಧನ ಬಿಡುಗಡೆಯಾಗಿಲ್ಲ. ರೈತರು ಈಗಲೂ ಗ್ರಾಮಕರಣಿಕ, ಕಂದಾಯ ನಿರೀಕ್ಷಕರು, ತಹಶೀಲ್ದಾರರ ಕಚೇರಿಗೆ ಅಲೆದಾಡುವಂತಹ ಸಮಸ್ಯೆ ಸೃಷ್ಟಿಯಾಗಿದೆ ಎಂದು ಶಾಸಕ ಸಂಜೀವ ಮಠಂದೂರು, ಹರೀಶ್ ಪೂಂಜಾ ಮತ್ತಿತರರು ಹೇಳಿದರು.

40,260 ಅರ್ಜಿಗಳ ಪೈಕಿ 38,167 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಕೆಲವು ಅರ್ಜಿದಾರರು ಬ್ಯಾಂಕ್ ಖಾತೆ ನೀಡದ ಕಾರಣ ಹಣ ಪಾವತಿಯಾಗಿಲ್ಲ. ಆದರೂ ರೈತರ ಅರ್ಜಿಯನ್ನು ಪರಿಗಣಿಸಿ ಗರಿಷ್ಠ ಮಟ್ಟದಲ್ಲಿ ಪರಿಹಾರ ಧನ ನೀಡಲು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನುಡಿದರು.

ಘಾಟ್ ರಸ್ತೆಗಳು ಅಪಾಯಕಾರಿ: ಜಿಲ್ಲೆಯನ್ನು ಸಂಪರ್ಕಿಸುವ ಶಿರಾಡಿ, ಸಂಪಾಜೆ, ಚಾರ್ಮಾಡಿ, ಆಗುಂಬೆ ಘಾಟ್‌ಗಳ ರಸ್ತೆಗಳು ಅಪಾಯಕಾರಿಯಾಗಿದೆ. ಕಳೆದ ಮಳೆಗೆ ಶಿರಾಡಿ ಘಾಟ್‌ನಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಇದೀಗ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಬಿ.ಸಿ.ರೋಡ್-ಅಡ್ಡಹೊಳೆ, ಶಿರಾಡಿ ಘಾಟ್ ನಡುವಿನ ರಸ್ತೆಯ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕಂಪೆನಿಯು ಕೆಲಸ ಮಾಡದೆ ದೂರ ಸರಿದಿದೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದ್ದು, ಪರ್ಯಾಯ ವ್ಯವಸ್ಥೆಗೆ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಸಭೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News