‘‘ಭೂಮಿಯನ್ನು ಕಿತ್ತುಕೊಂಡಿದ್ದಾರೆ,ಹೆತ್ತವರನ್ನು ಬೆದರಿಸಿದ್ದಾರೆ’’

Update: 2019-06-18 17:56 GMT

ಹೈದರಾಬಾದ್,ಜೂ.18: ತನ್ನ ಕುಟುಂಬಕ್ಕೆ ಸೇರಿದ ಆರು ಎಕರೆ ಜಮೀನನ್ನು ಅತಿಕ್ರಮಿಸಿಕೊಳ್ಳಲಾಗಿದೆ ಮತ್ತು ತನ್ನ ಹೆತ್ತವರಿಗೆ ಬೆದರಿಕೆಯೊಡ್ಡಲಾಗಿದೆ ಎಂದು ತೆಲಂಗಾಣ ಮೂಲದ ಯೋಧರೋರ್ವರು ಆರೋಪಿಸಿದ್ದಾರೆ.

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿನ ತನ್ನ ಕುಟುಂಬದ ಜಮೀನನ್ನು ಬಲವಂತದಿಂದ ಕಿತ್ತುಕೊಳ್ಳಲಾಗಿದೆ ಎಂದು ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಎಸ್.ಸ್ವಾಮಿ ವೀಡಿಯೊ ಸಂದೇಶದಲ್ಲಿ ಅಳಲು ತೋಡಿಕೊಂಡಿದ್ದಾರೆ.

 ಸ್ವಾಮಿಯವರ ಆರೋಪಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದ ಕಾಮರೆಡ್ಡಿ ಜಿಲ್ಲಾಧಿಕಾರಿ ಎನ್.ಸತ್ಯನಾರಾಯಣ ಅವರು,ಯೋಧ ಕಳೆದ ತಿಂಗಳು ಈ ಬಗ್ಗೆ ಮಾತನಾಡಿದ್ದಾಗ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಾನು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದೆ ಎಂದು ತಿಳಿಸಿದರು.

 ವಿಚಾರಣೆಯ ಬಳಿಕ ಜಮೀನು ವಿವಾದದಲ್ಲಿದೆ ಎನ್ನುವುದು ತಿಳಿದುಬಂದಿತ್ತು. ಪರಿಹಾರಕ್ಕಾಗಿ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಜಿಲ್ಲಾಡಳಿತದ ಅಧಿಕಾರಿಗಳು ಸ್ವಾಮಿಯವರ ತಂದೆಗೆ ಪತ್ರಮುಖೇನ ಸೂಚಿಸಿದ್ದರು.

‘‘ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಜೈ ಜವಾನ್,ಜೈ ಕಿಸಾನ್ ಎಂದು ಹೇಳುತ್ತಾರೆ,ಆದರೆ ಯೋಧರು ಅಥವಾ ರೈತರಿಗೆ ಸೇರಿದ ಆಸ್ತಿಗಳಿಗೆ ಯಾವುದೇ ರಕ್ಷಣೆಯಿಲ್ಲ. ಇಂದು ನನಗೆ ಆಗಿರುವುದು ನಾಳೆ ನಿಮಗೂ ಆಗಬಹುದು ’’ಎಂದು ವೀಡಿಯೊದಲ್ಲಿ ಹೇಳಿರುವ ಸ್ವಾಮಿ,ಕಂದಾಯ ಇಲಾಖೆ ಅಥವಾ ಇತರ ಅಧಿಕಾರಿಗಳಿಂದ ಸೂಕ್ತ ಉತ್ತರ ದೊರಕಿಲ್ಲ ಎಂದು ಆರೋಪಿಸಿದ್ದಾರೆ.

ವೀಡಿಯೊವನ್ನು ಶೇರ್ ಮಾಡಿಕೊಳ್ಳುವಂತೆ ಮತ್ತು ಅದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ತಲುಪಲು ನೆರವಾಗುವಂತೆಯೂ ಅವರು ಜನರನ್ನು ಕೋರಿಕೊಂಡಿದ್ದಾರೆ.

ಜಿಲ್ಲಾಡಳಿತದ ಅಧಿಕಾರಿಗಳ ವರದಿಯಂತೆ ಜಮೀನಿನ ಒಡೆತನ ಕುರಿತಂತೆ ಸ್ವಾಮಿಯವರ ತಂದೆ ಮತ್ತು ಇನ್ನೋರ್ವ ವ್ಯಕ್ತಿಯ ನಡುವೆ ವಿವಾದವಿತ್ತು. ಆ ವ್ಯಕ್ತಿ 2016ರಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದ ಮತ್ತು ನ್ಯಾಯಾಲಯವು ಆತನ ಪರವಾಗಿ ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News