ವೈದ್ಯರ ಮುಷ್ಕರದಿಂದಾದ ಲಾಭವೇನು?

Update: 2019-06-18 18:07 GMT

ಮಾನ್ಯರೇ,

ದೇಶಾದ್ಯಂತ ಮೊನ್ನೆ ಐಎಂಎ ಕರೆಗೆ ಓಗೊಟ್ಟ ವೈದ್ಯರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವುದರ ಮೂಲಕ ಬಂದ್ ಆಚರಿಸಿದರು. ಖಾಸಗಿ ವೈದ್ಯರೊಂದಿಗೆ ಐಎಂಎ ಪದಾಧಿಕಾರಿಗಳಾದ ಕೆಲ ಸರಕಾರಿ ವೈದ್ಯರು ಕೂಡ ಈ ಮುಷ್ಕರಕ್ಕೆ ಸಾಥ್ ನೀಡಿದರು. ಒಳ್ಳೆಯದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಕಾನೂನಾತ್ಮಕ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ, ಪ್ರತಿಭಟನೆ, ಬಂದ್ ಮಾಡುವುದರ ಮೂಲಕ ಸರಕಾರದ ಗಮನವನ್ನು ಕೇಂದ್ರೀಕರಿಸುವುದು ಸಾಮಾನ್ಯ.

ಕೋಲ್ಕತಾದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಎಲ್ಲರೂ ಖಂಡಿಸಲೇಬೇಕು. ಆದರೆ ಅದನ್ನು ಮುಂದಿಟ್ಟುಕೊಂಡು ಇಡೀ ದೇಶದ ರೋಗಿಗಳ ಬದುಕನ್ನೇ ಅಸ್ತವ್ಯಸ್ತಗೊಳಿಸುವುದರ ಮೂಲಕ ವೈದ್ಯರು ಇಡೀ ದೇಶದ ಜನರ ಆರೋಗ್ಯದ ಮೇಲೆ ಹಲ್ಲೆ ಮಾಡಲು ಹೊರಟಂತಿದೆ. ವೈದ್ಯೋನಾರಾಯಣಹರಿ ಎಂದು ನಂಬುವ ನಮ್ಮ ದೇಶದ ಜನರಿಗೆ ತಾವು ಹರಿನಾರಾಯಣನಿಗೆ ಸಮರಲ್ಲ ಎಂದು ಸಾಬೀತುಪಡಿಸಿದ್ದಾರೆ.

ಹಾಗೆ ನೋಡಿದರೆ ಈ ವೈದ್ಯ ಮಹಾಶಯರು ಯಾರ ವಿರುದ್ಧ ಹೋರಾಟ, ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಒಂದು ರಾಜ್ಯಕ್ಕೆ ಸೀಮಿತವಾಗಿರುವ, ಅದೂ ರಾಜಕೀಯ ಪ್ರೇರಿತವಾಗಿರುವಘಟನೆಯನ್ನು ಇಡೀದೇಶದ ಬಡಜನತೆಯ ಮೇಲೆ ಹೇರುತ್ತಿರುವುದು ನ್ಯಾಯವೇ? ಇದನ್ನು ಪ್ರತಿಯೊಬ್ಬ ವೈದ್ಯನಾಗಿರುವ ವ್ಯಕ್ತಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

Writer - -ಎಂ.ಆರ್.ಮಾನ್ವಿ, ಭಟ್ಕಳ

contributor

Editor - -ಎಂ.ಆರ್.ಮಾನ್ವಿ, ಭಟ್ಕಳ

contributor

Similar News