ಇಲ್ಲದ ಶಿಸ್ತು ಸಮಿತಿಗೆ ಪ್ರಜ್ಞಾ ಸಿಂಗ್ ಪ್ರಕರಣ ವಹಿಸಿದ ಬಿಜೆಪಿ !

Update: 2019-06-18 18:10 GMT

ಮಹಾತ್ಮ ಗಾಂಧೀಜಿಯ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಬಣ್ಣಿಸಿ ವ್ಯಾಪಕ ಆಕ್ರೋಶ ಎದುರಿಸಿದ್ದ ಮಾಲೇಗಾಂವ್ ಸ್ಫೋಟ ಆರೋಪಿ ಹಾಗು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧದ ಬಿಜೆಪಿ ಶಿಸ್ತುಕ್ರಮ ತೆಗೆದುಕೊಳ್ಳುವ ವಿಷಯ ಏನಾಯಿತು ? ಈವರೆಗೆ ಏನೂ ಆಗಿಲ್ಲ ಹಾಗು ಸದ್ಯದ ಪರಿಸ್ಥಿತಿ ನೋಡಿದರೆ ಏನು ಆಗುವ ಸಾಧ್ಯತೆಯೂ ಬಹಳ ವಿರಳ. ಏಕೆಂದರೆ ಈ ಕ್ರಮಕ್ಕೆ ಶಿಫಾರಸು ಮಾಡಬೇಕಾದ ಪಕ್ಷದ ಶಿಸ್ತು ಸಮಿತಿಯೇ ಸದ್ಯಕ್ಕೆ ಬಹುತೇಕ ಅಸ್ತಿತ್ವದಲ್ಲಿಲ್ಲ ! 

ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾರದಲ್ಲಿರುವಾಗ ಪ್ರಜ್ಞಾ ಸಿಂಗ್ ಈ ವಿವಾದಾಸ್ಪದ ಹೇಳಿಕೆ ನೀಡಿದ್ದರು. ಇದಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾದಾಗ ಬಿಜೆಪಿ ಇದನ್ನು ಶಿಸ್ತು ಸಮಿತಿಗೆ ವಹಿಸಿತ್ತು. ಮೇ 17 ರಂದು ಈ ಬಗ್ಗೆ ಬಿಜೆಪಿ ಪ್ರಕಟಣೆ ನೀಡಿತ್ತು. ಹತ್ತು ದಿನದೊಳಗೆ ಈ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಪಕ್ಷಾಧ್ಯಕ್ಷ ಅಮಿತ್ ಶಾ ಹೇಳಿದ್ದರು.  ಗಾಂಧಿ ಹಂತಕ ದೇಶಭಕ್ತ ಎಂದು ಪ್ರಜ್ಞಾ ಸಿಂಗ್ ಹೇಳಿರುವುದನ್ನು ತಾನು ಇಂದಿಗೂ ಕ್ಷಮಿಸುವುದಿಲ್ಲ ಎಂದು ಅದೇ ದಿನ ಪ್ರಧಾನಿ ಮೋದಿ ಅವರೂ ಹೇಳಿದ್ದರು. ಈಗ ತಿಂಗಳಾದರೂ ಈ ಬಗ್ಗೆ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. 

ಇದಕ್ಕೆ ಕಾರಣ - ಪಕ್ಷದ ಮೂರು ಸದಸ್ಯರ ಶಿಸ್ತು ಸಮಿತಿಯೇ ಈಗ ಬಹುತೇಕ ಅಸ್ತಿತ್ವದಲ್ಲಿಲ್ಲ. ಅದರ ಅಧ್ಯಕ್ಷ ಗಣೇಶಿ ಲಾಲ್ ಒಡಿಶಾ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಇನ್ನೋರ್ವ ಸದಸ್ಯ ವಿಜಯ್ ಚಕ್ರವರ್ತಿ ವೈಯಕ್ತಿಕ ಕಾರಣ ನೀಡಿ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮೂರನೇ ಸದಸ್ಯ ಸತ್ಯದೇವ್ ಸಿಂಗ್ ಅವರು ಉತ್ತರ ಪ್ರದೇಶ ರಾಜ್ಯ ಘಟಕದ ಶಿಸ್ತು ಸಮಿತಿಯ ಅಧ್ಯಕ್ಷರೂ ಹೌದು. ಅಲ್ಲಿ ಅವರಿಗೆ ಈಗಾಗಲೇ ಪಕ್ಷ ವಿರೋಧಿ ಚಟುವಟಿಕೆಗಳ ಕುರಿತ ನೂರಕ್ಕೂ ಹೆಚ್ಚು ದೂರುಗಳನ್ನು ಪರಿಶೀಲಿಸುವ ಕೆಲಸ ಬಾಕಿಯುಳಿದಿದೆ! 

ಪ್ರಜ್ಞಾ ಸಿಂಗ್ ಪ್ರಕರಣವನ್ನು ಶಿಸ್ತು ಸಮಿತಿಗೆ ವಹಿಸಿದಾಗ ಅದರಲ್ಲಿದ್ದ ಏಕೈಕ ಸದಸ್ಯ ಸತ್ಯದೇವ್ ಸಿಂಗ್ ಅವರು ಇಷ್ಟು ದೊಡ್ಡ ಪ್ರಕರಣವನ್ನು ಒಬ್ಬ ಸದಸ್ಯ ತೀರ್ಮಾನಿಸಲು ಅಸಾಧ್ಯ. ಹಾಗಾಗಿ ಪ್ರಜ್ಞಾ ಸಿಂಗ್ ಅವರನ್ನು ಅಮಾನತು ಮಾಡುವ ಕುರಿತು ನೀವೇ ನಿರ್ಧಾರ ತೆಗೆದುಕೊಳ್ಳಿ ಅಥವಾ ಪಕ್ಷಾಧ್ಯಕ್ಷರಿಗೆ ವರ್ಗಾಯಿಸಿ ಎಂದು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರನ್ನು ಕೇಳಿಕೊಂಡಿದ್ದರು. 

ಅಮಿತ್ ಶಾ ಸೂಚಿಸಿದ್ದ ಹತ್ತು ದಿನಗಳ ಗಡುವು ಮುಗಿದು ಹಲವು ದಿನಗಳ ಬಳಿಕ ಜೂನ್ 4 ರಂದು ಶಿಸ್ತು ಸಮಿತಿಗೆ ಪಂಜಾಬ್ ನ ಅವಿನಾಶ್ ರಾಯ್ ಖನ್ನಾ ಹಾಗು ಉತ್ತರ ಪ್ರದೇಶದ ಓಮ್ ಪಾಠಕ್ ಅವರನ್ನು ಪಕ್ಷ ನೇಮಿಸಿತು.  ಪ್ರಜ್ಞಾ ಪ್ರಕರಣದ ಕುರಿತು theprint.in  ಪಾಠಕ್ ಅವರನ್ನು ಕೇಳಿದಾಗ ನಾನು ಆ ಬಗ್ಗೆ ಮಾತಾಡಲು ಸಾಧ್ಯವಿಲ್ಲ ಎಂದವರು ಹೇಳಿದರೆ ಇನ್ನೋರ್ವ ಹೊಸ ಸದಸ್ಯ ಖನ್ನಾ ಅವರು ಪ್ರಕರಣದ ಸಭೆಗಳ ವಿವರ ಪಕ್ಷದ ಕಾರ್ಯದರ್ಶಿ ಮಹೇಂದ್ರ ಪಾಂಡೆ ಅವರಲ್ಲಿದೆ ಎಂದು ಹೇಳಿದರಲ್ಲದೆ ತನಗೆ ತಿಳಿದಂತೆ ಈವರೆಗೆ ಈ ವಿಷಯದಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ, ಅಮಿತ್ ಶಾ ಅವರ ಕೈಯಲ್ಲಿ ಅಂತಿಮ ತೀರ್ಮಾನವಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News