ದತ್ತಾಂಶ ಸ್ಥಳಿಯೀಕರಣ ನಿಯಮದ ಆತಂಕದ ಬಗ್ಗೆ ಆರ್‌ಬಿಐ ಪರಿಶೀಲನೆ: ಸರಕಾರ

Update: 2019-06-18 18:27 GMT

ಹೊಸದಿಲ್ಲಿ, ಜೂ.18: ತನ್ನ ಗ್ರಾಹಕರ ದತ್ತಾಂಶಗಳ ದಾಖಲೆಗಳನ್ನು ವಿದೇಶಗಳಲ್ಲಿ ಇಡದೆ ಭಾರತದಲ್ಲೇ ಶೇಖರಿಸಿಡಬೇಕು ಎಂಬ ಕಠಿಣ ದತ್ತಾಂಶ ಸ್ಥಳಿಯೀಕರಣ ನಿಯಮದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಪರಿಶೀಲನೆ ನಡೆಸಲಿದೆ ಎಂದು ಸರಕಾರ ಮಂಗಳವಾರ ತಿಳಿಸಿದೆ. ಪಾವತಿ ಸಂಸ್ಥೆಗಳು ತಮ್ಮ ಗ್ರಾಹಕರ ದತ್ತಾಂಶಗಳನ್ನು ಸ್ಥಳೀಯ ಸರ್ವರ್‌ಗಳಲ್ಲೇ ಶೇಖರಿಸಿಡಬೇಕು ಎಂದು ಆರ್‌ಬಿಐ ಕಳೆದ ಎಪ್ರಿಲ್‌ನಲ್ಲಿ ಸೂಚನೆ ನೀಡಿತ್ತು. ಈ ಆದೇಶವನ್ನು ಪಾಲಿಸಲು ಪಾವತಿ ಸಂಸ್ಥೆಗಳಿಗೆ ಆರು ತಿಂಗಳ ಸಮಯಾವಕಾಶ ನೀಡಲಾಗಿತ್ತು. ಈ ಗಡುವನ್ನು ವೀಸಾ ಮತ್ತು ಮಾಸ್ಟರ್ ಕಾರ್ಡ್ ಸೇರಿದಂತೆ ಕೆಲವು ವಿದೇಶಿ ಸಂಸ್ಥೆಗಳು ತಪ್ಪಿಸಿಕೊಂಡಿದ್ದವು. ಈ ವಿಷಯದ ಬಗ್ಗೆ ಚರ್ಚೆ ನಡೆಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಸೋಮವಾರ ತಾಂತ್ರಿಕ ಕೈಗಾರಿಕೆ ಮತ್ತು ಇ-ಕಾಮರ್ಸ್ ಕಂಪೆನಿಗಳ ಜೊತೆ ಸಭೆ ನಡೆಸಿದರು. ಆರ್‌ಬಿಐಯ ದತ್ತಾಂಶ ಶೇಖರಣೆ ಮತ್ತು ಪ್ರಕ್ರಿಯೆ ಸಂಬಂಧಿ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಎಲ್ಲ ಕಂಪೆನಿಗಳ ಪ್ರತಿನಿಧಿಗಳು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಆರ್‌ಬಿಐಯ ಸಹಾಯಕ ಗವರ್ನರ್ ಬಿ.ಪಿ ಕನುಂಗೊ ಕೈಗಾರಿಕಾ ಪ್ರತಿನಿಧಿಗಳಿಗೆ ಭರವಸೆ ನೀಡಿದ್ದಾರೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. ಅಂತರ್‌ರಾಷ್ಟ್ರೀಯ ಪಾವತಿ ಸಂಸ್ಥೆಗಳು ಸಾಮಾನ್ಯವಾಗಿ ತಮ್ಮ ದತ್ತಾಂಶಗಳನ್ನು ಜಾಗತಿಕ ಸರ್ವರ್‌ಗಳಲ್ಲಿ ಶೇಖರಿಸಿಡುತ್ತವೆ ಮತ್ತು ಸ್ಥಳೀಯವಾಗಿ ಈ ದತ್ತಾಂಶಗಳನ್ನು ಶೇಖರಿಸಿಡಬೇಕಾದರೆ ಅವುಗಳು ಹೆಚ್ಚುವರಿ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ದತ್ತಾಂಶಗಳನ್ನು ಭಾರತದಲ್ಲೇ ಶೇಖರಿಸಿಟ್ಟರೆ ಅಗತ್ಯಬಿದ್ದಲ್ಲಿ ಅವುಗಳ ಮೇಲೆ ನಿಗಾಯಿಡುವುದು ಮತ್ತು ತನಿಖೆ ನಡೆಸುವುದು ಸುಲಭವಾಗುತ್ತದೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News