ಎನ್‍ಡಿಟಿವಿ ಪ್ರಣಯ್ ರಾಯ್, ರಾಧಿಕಾ ರಾಯ್ ಪ್ರಕರಣ: ಸೆಬಿ ಆದೇಶಕ್ಕೆ ತಡೆಯಾಜ್ಞೆ

Update: 2019-06-19 06:01 GMT

ನವದೆಹಲಿ: ಎನ್‍ಡಿಟಿವಿ ಪ್ರವರ್ತಕರಾದ ಪ್ರಣಯ್ ರಾಯ್ ಹಾಗೂ ಅವರ ಪತ್ನಿ ರಾಧಿಕಾ ರಾಯ್ ಅವರಿಗೆ ತಮ್ಮ ಸಂಸ್ಥೆಯಲ್ಲಿ ಪ್ರಮುಖ ಹುದ್ದೆ ಹೊಂದುವುದಕ್ಕೆ ಸೆಬಿ ಹೇರಿರುವ ನಿರ್ಬಂಧಕ್ಕೆ ಸೆಕ್ಯುರಿಟೀಸ್ ಅಪೀಲು ಪೀಠ (ಸೆಕ್ಯುರಿಟೀಸ್ ಅಪೆಲ್ಲೇಟ್ ಟ್ರಿಬ್ಯೂನಲ್) ಜೂನ್ 18, ಮಂಗಳವಾರ ತಡೆ ಹೇರಿದೆ.

"ಶೇ 61ಕ್ಕಿಂತಲೂ ಹೆಚ್ಚು ಶೇರುಗಳನ್ನು ಹೊಂದಿರುವ ಅಪೀಲುದಾರರಿಂದ ನಿರ್ವಹಿಸಲ್ಪಡುತ್ತಿರುವ ಹಾಗೂ ಷೇರು ಪೇಟೆಯಲ್ಲಿ ಲಿಸ್ಟೆಡ್ ಆಗಿರುವ ಕಂಪೆನಿಯೊಂದು ಮುಖ್ಯಸ್ಥರಿಲ್ಲದೇ ಇರಲು ಸಾಧ್ಯವಿಲ್ಲ,'' ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

"ನಿರ್ಬಂಧ ವಿಧಿಸುವಂತಹ ಆದೇಶ ಈ ಹಂತದಲ್ಲಿ ಹೊರನೋಟಕ್ಕೆ ಎನ್‍ಡಿಟಿವಿಯ ಶೇರುದಾರರ ಅಥವಾ ಹೂಡಿಕೆದಾರರ ಹಿತಾಸಕ್ತಿಯಲ್ಲಿಲ್ಲ,'' ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಎನ್‍ಡಿಟಿವಿ ಪ್ರವರ್ತಕರಾದ ರಾಯ್ ದಂಪತಿ ಹಾಗೂ ಆರ್‍ಪಿಪಿಆರ್ ಲಿಮಿಟೆಡ್ ಸಲ್ಲಿಸಿದ ಅಪೀಲಿನ ಮೇಲಿನ ವಿಚಾರಣೆ ನಡೆಸಿ ಟ್ರಿಬ್ಯುನಲ್ ಮೇಲಿನಂತೆ  ಹೇಳಿದೆ.

ಮುಂದಿನ ಆದೇಶದ ತನಕ ಸೆಬಿ ಆದೇಶಕ್ಕೆ ತಡೆಯಾಜ್ಞೆ ವಿಧಿಸಲಾಗಿದೆ ಎಂದು ಹೇಳಿರುವ ಟ್ರಿಬ್ಯುನಲ್ "ಈ ಅವಧಿಯಲ್ಲಿ ಅಪೀಲುದಾರರು  ಎನ್‍ಡಿಟಿವಿಯಲ್ಲಿನ ತಮ್ಮ ಶೇರುಗಳನ್ನು ಪರಭಾರೆ ಮಾಡುವಂತಿಲ್ಲ ಯಾ ಅಡಮಾನವಿರಿಸುವಂತಿಲ್ಲ,'' ಎಂದೂ ತನ್ನ ಆದೇಶದಲ್ಲಿ ತಿಳಿಸಿದೆ.

ಸೆಬಿಗೆ ತನ್ನ ಉತ್ತರ ನೀಡಲು ಆರು ವಾರಗಳ ಕಾಲಾವಕಾಶ ನೀಡಿರುವ ಟ್ರಿಬ್ಯುನಲ್ ಈ ಉತ್ತರಕ್ಕೆ ಪ್ರತಿಕ್ರಿಯೆಯನ್ನು ನೀಡಲು ಅಪೀಲುದಾರರಿಗೆ ಮೂರು ವಾರಗಳ ಕಾಲಾವಕಾಶವನ್ನು ನೀಡಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 16ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News