ಮಳೆ ನೀರು ಕೊಯ್ಲಿಗಾಗಿ ಹಸಿರು ಕಟ್ಟಡ ನೀತಿ ಜಾರಿ: ಸಚಿವ ಖಾದರ್

Update: 2019-06-19 14:18 GMT

ಮಂಗಳೂರು, ಜೂ.19: ಮಂಗಳೂರು ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ‘ಹಸಿರು ಕಟ್ಟಡ ನೀತಿ’ (ಗ್ರೀನ್ ಬಿಲ್ಡಿಂಗ್ ಪಾಲಿಸಿ)ಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ದ.ಕ. ಜಿಲ್ಲಾ ಪಂಚಾಯತ್ ಆಶ್ರಯ ಹಾಗೂ ಉದಯವಾಣಿ ಪತ್ರಿಕೆಯ ಸಹಭಾಗಿತ್ವದಲ್ಲಿ ಆಯೋಜಿಲಾದ ಮಳೆ ಕೊಯ್ಲು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ನೀತಿಯಡಿ 30x40 ಮನೆ ಅಥವಾ ಕಟ್ಟಡ ರಚನೆ ಸಂದರ್ಭ ಕಡ್ಡಾಯವಾಗಿ ಮಳೆ ನೀರು ಕೊಯ್ಲು (ನೀರಿಂಗಿಸುವ) ವ್ಯವಸ್ಥೆಯನ್ನು ಅಳವಡಿಸುವುದು ಹಾಗೂ ಕನಿಷ್ಠ ಸಂಖ್ಯೆಯಲ್ಲಿ ಮರ ಗಿಡಗಳನ್ನು ಬೆಳೆಸುವ ಕುರಿತಂತೆ ನಿಯಮಗಳನ್ನು ರೂಪಿಸಲಾಗುವುದು.ಈ ರೀತಿ ನಿಯಮಗಳನ್ನು ಅಳವಡಿಸುವವರಿಗೆ ತೆರಿಗೆಯಲ್ಲಿ ವಿನಾಯಿತಿಯಂತಹ ಪ್ರೋತ್ಸಾಹಕ ಕ್ರಮ ಹಾಗೂ ಪಾಲಿಸದವರಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ರೀತಿಯಲ್ಲಿ ಈ ನೀತಿಯಡಿ ನಿಯಮಗಳನ್ನು ರೂಪಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.

ಎಲ್ಲಾ ಕಡೆ ಕಾಂಕ್ರೀಟ್ ಹಾಗೂ ಇಂಟರ್‌ಲಾಕ್‌ಗಳನ್ನು ಅಳವಡಿಸುತ್ತಿರುವುದರಿಂದ ಮಳೆ ನೀರು ಭೂಮಿಗೆ ಇಂಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಸ್ತೆಗಳನ್ನು ನಿರ್ಮಿಸುವ ಸಂದರ್ಭದಲ್ಲೂ ರಸ್ತೆಯ ಇಕ್ಕೆಲಗಳಲ್ಲಿ ನಿರ್ದಿಷ್ಟ ಸ್ಥಳಾವಕಾಶವನ್ನು ಕಾಯ್ದಿರಿಸಿ ಅಲ್ಲಿ ಹಸಿರು ಕಾಪಾಡುವ ನಿಟ್ಟಿನಲ್ಲಿ ಈ ನೀತಿಯಡಿ ಕ್ರಮ ಕೈಗೊಳ್ಳಲಾಗುವುದು. ಇದೇ ವೇಳೆ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸ್ವಚ್ಛತೆಗೆ ಸಂಬಂಧಿಸಿಯೂ ಕಾನೂನು ರಚನೆಗೆ ತಜ್ಞರ ಸಮಾಲೋಚನೆ ನಡೆಯುತ್ತಿದೆ ಎಂದು ಸಚಿವ ಖಾದರ್ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ ಕಾಮತ್ ವಹಿಸಿದ್ದು, ಶಾಸಕ ನೆಲೆಯಲ್ಲಿ ನಾನು ನನ್ನ ಕ್ಷೇತ್ರದ ಜನರಿಗೆ ಪ್ರೇರಣೆದಾಯಕವಾಗಿ ಮಳೆ ನೀರು ಇಂಗಿಸುವ ಕಾರ್ಯವನ್ನು ತನ್ನ ಮನೆಯ ಸುತ್ತ ಪೂರ್ಣ ಪ್ರಮಾಣದಲ್ಲಿ ಮಾಡುವ ಕಾರ್ಯವನ್ನು ಆರಂಭಿಸಿರುವುದಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಕ್ರೆಡೈ ಅಧ್ಯಕ್ಷ ನವೀನ್ ಕಾರ್ಡೋಜಾ, ಜಿ.ಪಂ. ಉಪ ಕಾರ್ಯದರ್ಶಿ ಮಹೇಶ್, ಪತ್ರಿಕೆಯ ಸಂಪಾದಕ ಅರವಿಂದ ನಾವಡ ಉಪಸ್ಥಿತರಿದ್ದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಘು ಆಲನಹಳ್ಳಿ ಮಾತನಾಡಿ ಮಳೆ ನೀರು ಕೊಯ್ಲಿನ ಮಹತ್ವದ ಬಗ್ಗೆ ಮಾತನಾಡಿದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಪುದುವೆಟ್ಟು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು. ಆನಂದ್ ಕೆ. ವಂದಿಸಿದರು.

ದ.ಕ.ದಲ್ಲಿ ನೀರಿನ ಎಚ್ಚರಿಕೆ ಕನಿಷ್ಠ: ಶ್ರೀ ಪಡ್ರೆ

ದಕ್ಷಿಣ ಕನ್ನಡ ಜನತೆಯಲ್ಲಿ ಮಳೆ ನೀರಿನ ಕುರಿತಂತೆ ಎಚ್ಚರಿಕೆ ಅತೀ ಕನಿಷ್ಠವಾಗಿದೆ. ನೀರಿನ ಕ್ಷಾಮ ಎದುರಾದಾಗ, ಬರ ಬಂದಾಗ ಮಾತ್ರವೇ ನೀರಿನ ಮಹತ್ವವನ್ನು ತಿಳಿಯುವಂತ ಸನ್ನಿವೇಶದಲ್ಲಿ ನಾವಿದ್ದೇವೆ. ಆದ್ದರಿಂದಲೇ ಸರಾಸರಿ ವಾರ್ಷಿಕ 3500 ಮಿ.ಮೀ.ನಷ್ಟು ಮಳೆ ಬೀಳುವ ಜಿಲ್ಲೆಯಲ್ಲಿ ನೀರಿಗಾಗಿ ಟ್ಯಾಂಕರ್‌ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಅಭ್ಯುದಯದ ಲಕ್ಷಣವಲ್ಲ, ಇದು ನಾಚಿಕೆಗೇಡು ಎಂದು ಜಲ ತಜ್ಞ ಶ್ರೀಪಡ್ರೆ ಬೇಸರಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕನಿಷ್ಠ ಸದಸ್ಯರಿರುವ ಕುಟುಂಬವೊಂದಕ್ಕೆ ಮಿತವಾಗಿ ನೀರನ್ನು ಬಳಸಿದರೆ ವಾರ್ಷಿಕ ಸುಮಾರು 3 ಲಕ್ಷ ಲೀಟರ್ ನೀರು ಸಾಕಾಗುತ್ತದೆ. ಹಾಗಾಗಿ ದ.ಕ. ಜಿಲ್ಲೆಯಲ್ಲಿ ಸುರಿಯುವ ಸರಾಸರಿ ಮಳೆಯ ಲೆಕ್ಕಾಚಾರದಲ್ಲಿಯೇ ಮನೆಯೊಂದರ ಮಹಡಿ ಮೇಲೆ ಬೀಳುವ ನೀರನ್ನು ಬಾವಿಗೆ ಇಂಗಿಸುವ ಮೂಲಕ ವರ್ಷವಿಡೀ ಆ ನೀರನ್ನು ಬಳಸಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ನಾವಿಂದು ಮಾಡಬೇಕಾಗಿದೆ. ಹಾಗಾಗಿ ಕಾನೂನನ್ನು ಜಾರಿ ತರುವ ಜತೆಗೇ ಮುಖ್ಯವಾಗಿ ಜನರು ನಗುನಗುತ್ತಾ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಳ್ಳುವುದು ಅತೀ ಅಗ್ಯ ಎಂದು ಅವರು ಸಲಹೆ ನೀಡಿದರು.

ತೆರೆದ ಬಾವಿಗಳು ನೀರು ಮರುಪೂರಣಕ್ಕೆ ಬಹು ಸೂಕ್ತ. 400 ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಬಾವಿಗಳ ಮೇಲೆ ನಾವು ವಿಶ್ವಾಸವಿರಿಸಿ ಮಳೆ ನೀರನ್ನು ಬಾವಿಗೆ ಇಂಗಿಸುವ ಕೆಲಸವನ್ನು ಮಾಡುವ ಮೂಲಕ ಮುಂದೆ ನಾವು ಎದುರಿಸಬೇಕಾದ ನೀರಿನ ಅಭಾವದಿಂದ ಪಾರಾಗಲು ಸಾಧ್ಯ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News