ಏಕಕಾಲದಲ್ಲಿ ಚುನಾವಣೆ: ಸರ್ವಪಕ್ಷ ಸಭೆಗೆ ಕಾಂಗ್ರೆಸ್,ಇತರ ಪ್ರತಿಪಕ್ಷಗಳು ಗೈರು

Update: 2019-06-19 14:50 GMT

ಹೊಸದಿಲ್ಲಿ,ಜೂ.19: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಪರಿಕಲ್ಪನೆಗೆ ವಿರುದ್ಧವಾಗಿರುವ,ಕಾಂಗ್ರೆಸ್ ಸೇರಿದಂತೆ ಹಲವಾರು ಪ್ರತಿಪಕ್ಷಗಳು ‘ಒಂದು ರಾಷ್ಟ್ರ,ಒಂದು ಚುನಾವಣೆ’ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ಕರೆದಿದ್ದ ಸರ್ವಪಕ್ಷ ಸಭೆಗೆ ಗೈರುಹಾಜರಾಗಿದ್ದವು.

ಸಭೆಗೆ ಗೈರುಹಾಜರಾಗಿದ್ದ ಪಕ್ಷಗಳಲ್ಲಿ ಎನ್‌ಡಿಎ ಮಿತ್ರಪಕ್ಷ ಶಿವಸೇನೆ,ಎಸ್‌ಪಿ,ಬಿಎಸ್‌ಪಿ,ಡಿಎಂಕೆ,ಟಿಡಿಪಿ ಮತ್ತು ತೃಣಮೂಲ ಸೇರಿವೆ.

 ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಎಡಪಕ್ಷಗಳು ಭಾಗವಹಿಸಿದ್ದವಾದರೂ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಪರಿಕಲ್ಪನೆಗೆ ವಿರೋಧ ವ್ಯಕ್ತಪಡಿಸಿದವು. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಮತ್ತು ಸಿಪಿಐ ನಾಯಕ ಡಿ.ರಾಜಾ ಅವರು ಎಡಪಕ್ಷಗಳನ್ನು ಪ್ರತಿನಿಧಿಸಿದ್ದರು.

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಒಕ್ಕೂಟ ರಾಷ್ಟ್ರ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ,ತನ್ಮೂಲಕ ಸಂವಿಧಾನ ವಿರೋಧಿಯಾಗಿದೆ ಎಂದು ಯೆಚೂರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೆಸ್ ಇತರ ಪಕ್ಷಗಳೊಂದಿಗೆ ಸಮಾಲೋಚನೆಗಳ ಬಳಿಕ ಸಭೆಯಿಂದ ದೂರವಿರಲು ನಿರ್ಧರಿಸಿತ್ತು.

 ಇವಿಎಮ್‌ಗಳ ಕುರಿತು ಸರ್ವಪಕ್ಷ ಸಭೆ ಕರೆದಿದ್ದರೆ ತಾನು ಪಾಲ್ಗೊಳ್ಳುತ್ತಿದ್ದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಟ್ವೀಟಿಸಿದ್ದಾರೆ.

ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಸಭೆಯಲ್ಲಿ ಭಾಗವಹಿಸಿರಲಿಲ್ಲ,ಆದರೆ ನಾಯಕ ರಾಘವ ಛಡ್ಡಾ ಪಕ್ಷವನ್ನು ಪ್ರತಿನಿಧಿಸಿದ್ದರು. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರ ಹಾಗೂ ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಸರ್ವಪಕ್ಷ ಸಭೆಗೆ ಆಹ್ವಾನವನ್ನು ಮಂಗಳವಾರ ತಿರಸ್ಕರಿಸಿದ್ದ ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ಅದರ ಬದಲು ಸಮಾಲೋಚನೆಗಾಗಿ ‘ಒಂದು ರಾಷ್ಟ್ರ,ಒಂದು ಚುನಾವಣೆ’ ಕುರಿತು ಶ್ವೇತಪತ್ರವನ್ನು ಸಿದ್ಧಪಡಿಸುವಂತೆ ಕೇಂದ್ರಕ್ಕೆ ಸೂಚಿಸಿದ್ದರು.

ಮಂಗಳವಾರ ಸಂಜೆ ಸಭೆ ಸೇರಿದ್ದ ಯುಪಿಎ ಅಂಗಪಕ್ಷಗಳು ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಇತರ ಸಮಾನ ಮನಸ್ಕ ಪಕ್ಷಗಳೊಂದಿಗೆ ಚರ್ಚಿಸಲು ನಿರ್ಧರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News