ಮಂಗಳೂರು ವಿಮಾನ ನಿಲ್ದಾಣ ಬಳಿ ಭೂಕುಸಿತ !

Update: 2019-06-19 13:25 GMT

ಮಂಗಳೂರು, ಜೂ.19: ವಿಮಾನ ನಿಲ್ದಾಣದ ಸಮೀಪದ ಅದ್ಯಪಾಡಿ ಬಳಿ ಭೂಕುಸಿತದ ಸಂದರ್ಭ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ ಹಾಗೂ ರಕ್ಷಣಾ ಕಾರ್ಯವನ್ನು ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಮತ್ತು ಜಿಲ್ಲಾಡಳಿತದ ಪ್ರಕೃತಿ ವಿಕೋಪ ಘಟಕ ಜಂಟಿಯಾಗಿ ಬುಧವಾರ ಕೆಂಜಾರು ಅದ್ಯಪಾಡಿ ಗುಡ್ಡ ಪ್ರದೇಶದಲ್ಲಿ ಅಣಕು ಕಾರ್ಯಾಚರಣೆ ನಡೆಸಿದವು.

ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಾಕ್ಷಿಯಾದ ಅಣಕು ಕಾರ್ಯಾಚರಣೆಯಲ್ಲಿ ಭೂಕುಸಿತವಾದ ಸಂದರ್ಭದಲ್ಲಿ ಅಗ್ನಿಶಾಮಕ ದಳ, ಗೃಹರಕ್ಷಕ ದಳ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯದ ನಾನಾ ವಿಧಗಳನ್ನು ಪ್ರಸ್ತುತಪಡಿಸಿದವು.

ಜಿಲ್ಲಾಡಳಿತದಿಂದ ವಿಪತ್ತು ನಿರ್ವಹಣೆಗಾಗಿ ತೆಗೆದುಕೊಂಡ ಕ್ರಮವನ್ನು ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡಲಾಯಿತು.
ಘಟನೆ ನಡೆದ ಸ್ಥಳದಲ್ಲಿನ ಸಂತ್ರಸ್ತರ ಚೀರಾಟ ಹಾಗೂ ಅಪಾಯದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ರಕ್ಷಣಾ ಕಾರ್ಯವನ್ನು ವಿವಿಧ ಹಂತಗಳಲ್ಲಿ ಮಾಡಲಾಗುತ್ತದೆ. ಮೊದಲಿಗೆ ಬಿದ್ದ ಮರಗಳನ್ನು ಕಡಿದು ದಾರಿ ಮಾಡಿಕೊಡಲಾಗುತ್ತದೆ. ಮಣ್ಣಿನ ಅಡಿ ಸಿಲುಕಿದವರನ್ನು ಬಿಡಿಸಿಕೊಂಡು ಹಗ್ಗ ಹಾಗೂ ಏಣಿಯ ಸಹಾಯದಿಂದ ಗುಡ್ಡದ ತುದಿ ತಲುಪಿ ರಕ್ಷಣಾ ಕಾರ್ಯ ಮುಂದುವರಿಯುತ್ತದೆ.

ಅಪಾಯದ ಸ್ಥಳದಿಂದ ‘ಫೈರ್‌ಮ್ಯಾನ್ ಲಿಫ್ಟ್’, ‘ಸಿಂಗಲ್ ಹ್ಯಾಂಡ್’ ವಿಧಾನ, ‘ಬ್ಯಾಕ್ ಟು ಬ್ಯಾಕ್’ ಮೊದಲಾದ ವಿಧಾನಗಳ ಮೂಲಕ ಗಾಯಾಳುಗಳನ್ನು ಟ್ರೈಯೇಜ್ ವಲಯ (ಆರೋಗ್ಯ ಇಲಾಖೆ ಪ್ರಥಮ ಚಿಕಿತ್ಸೆ ನೀಡುವ ಸ್ಥಳ)ಕ್ಕೆ ಕರೆದು ತರಲಾಗುತ್ತದೆ.

‘ರೆಡ್’, ‘ಯೆಲ್ಲೋ’, ‘ಬ್ಲಾಕ್’ ಹಾಗೂ ‘ಗ್ರೀನ್’ ಎಂಬ ನಾಲ್ಕು ವಿಭಾಗಗಳಲ್ಲಿ ಗಾಯಾಳುಗಳನ್ನು ವಿಂಗಡಿಸಲಾಗುತ್ತದೆ. ನಂತರ ಸೂಕ್ತ ಕ್ರಮ ತೆಗೆದುಕೊಳ್ಳುವುದನ್ನು ಅಣಕು ಕಾರ್ಯಾಚರಣೆಯಲ್ಲಿ ಪ್ರದರ್ಶನ ಮಾಡಲಾಯಿತು. ಕಾರ್ಯಾಚರಣೆಯಲ್ಲಿ 13 ಮಂದಿಯ ರಕ್ಷಣಾ ಕಾರ್ಯ ನಡೆಯಿತು. ಅಗ್ನಿಶಾಮಕದ 40, ಎನ್‌ಡಿಆರ್‌ಎಫ್‌ನ 26 ಹಾಗೂ ಹೋಮ್‌ಗಾರ್ಡ್ಸ್‌ನ 20 ಸಿಬ್ಬಂದಿ ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅಗ್ನಿಶಾಮಕ ದಳದ ಜಿಲ್ಲಾ ಮುಖ್ಯ ಅಗ್ನಿಶಾಮಕ ಅಧಿಕಾರಿ ಮುಹಮ್ಮದ್ ಝುಲ್ಫಿಕರ್ ನವಾಝ್, ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಟ್ ರಮೇಶ್ ಹಾಗೂ ತರಬೇತಿ ಬೋಧಕ ಮಾರ್ಕ್ ಸೇರಾ, ಎನ್‌ಡಿಆರ್‌ಎಫ್‌ನ ಆರ್.ಕೆ. ಉಪಾಧ್ಯಾಯ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್, ತಾಲೂಕು ವೈದ್ಯಾಧಿಕಾರಿ ನವೀನ್ ಕುಲಾಲ್ ಚಿಕಿತ್ಸಾ ಕಾರ್ಯಾಚರಣೆ ಹಾಗೂ ಆ್ಯಂಬುಲೆನ್ಸ್ ನಿರ್ವಹಣೆ ನೇತೃತ್ವ ವಹಿಸಿದ್ದರು.

ಅಣಕು ಪ್ರದರ್ಶನದ ನೋಡಲ್ ಅಧಿಕಾರಿಯಾಗಿ ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ವಹಿಸಿದ್ದರು. ಅಗ್ನಿಶಾಮಕ ದಳದ ಮಂಗಳೂರು ವಲಯ ಮುಖ್ಯಸ್ಥ ಟಿ.ಎನ್. ಶಿವಶಂಕರ್ ಕಾರ್ಯಾಚರಣೆ ಮಾಹಿತಿ ನೀಡುತ್ತಾ ನಿರೂಪಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯಕುಮಾರ್ ಅಣಕು ಕಾರ್ಯಾಚರಣೆಯಲ್ಲಿ ಸಂಪರ್ಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗೌರವಾಧ್ಯಕ್ಷ ಪ್ರಭಾಕರ ಶರ್ಮಾ, ಕಂದಾವರ ಗ್ರಾಪಂ ಅಧ್ಯಕ್ಷ ವಿಜಯಗೋಪಾಲ ಸುವರ್ಣ, ಪಿಡಿಒ ರೋಹಿಣಿ, ಬಜ್ಪೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪರಶಿವಮೂರ್ತಿ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿ ಪಿ.ಕೆ.ವಿಜಯಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಕುತೂಹಲದಿಂದ ಅಣಕು ಕಾರ್ಯಾಚರಣೆ ವೀಕ್ಷಿಸಿದರು.

‘ಸಮರ್ಪಕ ಪ್ರಕೃತಿ ವಿಕೋಪ ನಿರ್ವಹಣೆ’

ಪ್ರಾಕೃತಿಕ ವಿಕೋಪದ ಸಂದರ್ಭ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲು ಅಣುಕು ಕಾರ್ಯಾಚರಣೆ ಸಹಕಾರಿಯಾಗುತ್ತದೆ. ಅಗ್ನಿಶಾಮಕ ದಳದ ಜತೆಗೆ ಕೇಂದ್ರೀಯ ತಂಡ ಎನ್‌ಡಿಆರ್‌ಎಫ್ ಸೇರಿಕೊಂಡು ಕಾರ್ಯಾಚರಣೆ ಮಾಡಿರುವುದರಿಂದ ಹೆಚ್ಚಿನ ರಕ್ಷಣಾ ಕಾರ್ಯದ ಅರಿವು ಮೂಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರೂ ರಕ್ಷಣ ಕಾರ್ಯಕ್ಕೆ ಸಹಕಾರ ನೀಡಬೇಕು. ಕಳೆದ ಒಂದೂವರೆ ವರ್ಷದಿಂದ ಪ್ರಕೃತಿ ವಿಕೋಪ ನಿರ್ವಹಣೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಲ್ಲ ಇಲಾಖೆಗಳಿಗೂ ಮುನ್ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಅಧಿಕಾರಿಗಳು ಅಣಕು ಕಾರ್ಯಾಚರಣೆಯನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಬೇಕು. ಇದರಿಂದ ವಿಕೋಪದ ಸಂದರ್ಭದಲ್ಲಿ ಕಾರ್ಯಾಚರಣೆ ಸುಲಭವಾಗಲಿದೆ. ಮುಂದಿನ ದಿನಗಳಲ್ಲಿ ಮಳೆಯಲ್ಲಿಯೇ ಒಂದು ದಿನದ ಅಣಕು ಕಾರ್ಯಾಚರಣೆ ನಡೆಸಬೇಕು.
- ಸಸಿಕಾಂತ್ ಸೆಂಥಿಲ್

ಸ್ಟಿಕ್ಕಿ ಬೂಟ್‌ಗಾಗಿ ಬೇಡಿಕೆ

ಮಳೆ ಬರುವ ಸಂದರ್ಭ ಭೂಕುಸಿತ ಸಂಭವಿಸಿದ ಕಡೆಗಳಲ್ಲಿ ಸಾಮಾನ್ಯ ಶೂಗಳ ಮೂಲಕ ಕಾರ್ಯಾಚರಣೆ ತ್ರಾಸದಾಯಕವಾಗಿದ್ದು, ಸುರಕ್ಷಿತ ಕಾರ್ಯಾಚರಣೆಗಾಗಿ ಸ್ಟಿಕ್ಕಿ ಬೂಟ್ ಹಾಗೂ ಗಮ್‌ಬೂಟ್‌ಗಳನ್ನು ನೀಡಬೇಕು. ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಹಗ್ಗಗಳ ಅಗತ್ಯವಿದೆ ಎಂದು ರಕ್ಷಣಾ ದಳಗಳ ಅಧಿಕಾರಿಗಳು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಲ್ಲಿ ಬೇಡಿಕೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News