737 ಮ್ಯಾಕ್ಸ್ ಮಾದರಿಯ 200 ವಿಮಾನ ಖರೀದಿಗೆ ಬ್ರಿಟಿಶ್ ಏರ್‌ವೇಸ್ ಒಪ್ಪಂದ

Update: 2019-06-19 14:50 GMT

 ಪ್ಯಾರಿಸ್, ಜೂ. 19: ಬೋಯಿಂಗ್ ಕಂಪೆನಿಯ 737 ಮ್ಯಾಕ್ಸ್ 8 ಮಾದರಿಯ ಎರಡು ವಿಮಾನಗಳು ಪತನಗೊಂಡ ಹಿನ್ನೆಲೆಯಲ್ಲಿ ಈ ವಿಮಾನಗಳನ್ನು ಜಾಗತಿಕ ವಿಮಾನಯಾನ ಸಂಸ್ಥೆಗಳು ಸೇವೆಯಿಂದ ಹೊರಗಿಟ್ಟ ಬಳಿಕ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಬೋಯಿಂಗ್ ಕಂಪೆನಿಗೆ ಸಾಂತ್ವನ ನೀಡುವ ಘಟನೆಯೊಂದು ನಡೆದಿದೆ. ಬ್ರಿಟಿಶ್ ಏರ್‌ವೇಸ್‌ನ ಮಾಲಕತ್ವ ಹೊಂದಿರುವ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಗ್ರೂಪ್ (ಐಎಜಿ) ಕಂಪೆನಿಯು ಈ ಮಾದರಿಯ 200 ವಿಮಾನಗಳ ಖರೀದಿಯ ಇಂಗಿತ ವ್ಯಕ್ತಪಡಿಸುವ ಪತ್ರವೊಂದಕ್ಕೆ ಸಹಿ ಹಾಕಿದೆ.

ಈ ವ್ಯವಹಾರದ ಒಟ್ಟು ಮೊತ್ತ 24 ಬಿಲಿಯ ಡಾಲರ್ (1.67 ಲಕ್ಷ ಕೋಟಿ ರೂಪಾಯಿ)ಗೂ ಅಧಿಕ ಎಂದು ಬೋಯಿಂಗ್ ಕಂಪೆನಿ ತಿಳಿಸಿದೆ ಹಾಗೂ ಮುಂದಿನ ತಿಂಗಳುಗಳಲ್ಲಿ 737 ಮ್ಯಾಕ್ಸ್ ವಿಮಾನಗಳು ಸೇವೆಗೆ ಮರಳುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

737 ಮ್ಯಾಕ್ಸ್ 8 ಮತ್ತು 737 ಮ್ಯಾಕ್ಸ್ 10 ವಿಮಾನಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, 2023 ಮತ್ತು 2027ರ ನಡುವೆ ವಿಮಾನವನ್ನು ಬೋಯಿಂಗ್ ಕಂಪೆನಿಯು ಒದಗಿಸುತ್ತದೆ ಎಂದು ಐಎಜಿ ತಿಳಿಸಿದೆ.

ವಿಮಾನಗಳು ಸಿಎಫ್‌ಎಂ ಲೀಪ್ ಇಂಜಿನ್‌ಗಳನ್ನು ಹೊಂದಿರಲಿದ್ದು, ಬ್ರಿಟಿಶ್ ಏರ್‌ವೇಸ್, ವುಯೆಲಿಂಗ್ ಮತ್ತು ಲೆವೆಲ್ ಸೇರಿದಂತೆ ತನ್ನ ಹಲವಾರು ವಾಯುಯಾನ ಸಂಸ್ಥೆಗಳಲ್ಲಿ ಈ ವಿಮಾನಗಳನ್ನು ಐಎಜಿ ಬಳಸಿಕೊಳ್ಳಲಿದೆ.

737 ಮ್ಯಾಕ್ಸ್ 8 ಮಾದರಿಯ ಎರಡು ವಿಮಾನಗಳು ಪತನಗೊಂಡ ಬಳಿಕ ಮಾರ್ಚ್ ತಿಂಗಳಲ್ಲಿ ಈ ಮಾದರಿಯ ವಿಮಾನಗಳನ್ನು ಜಗತ್ತಿನಾದ್ಯಂತದ ವಾಯುಯಾನ ಸಂಸ್ಥೆಗಳು ಸೇವೆಯಿಂದ ಹೊರಗಿರಿಸಿರುವುದನ್ನು ಸ್ಮರಿಸಬಹುದಾಗಿದೆ.

ಅದೇ ವೇಳೆ, ವಿಮಾನದ ದೋಷಗಳನ್ನು ಸರಿಪಡಿಸಲು ಬೋಯಿಂಗ್ ಪ್ರಯತ್ನಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News