ಪಾಕ್ ಗೆ ಐಎಂಎಫ್ ಸಾಲ ಚೀನಾದ ಸಾಲ ಮರುಪಾವತಿಗೆ ಬಳಕೆಯಾಗಬಾರದು: ಅಮೆರಿಕ ಶರತ್ತು

Update: 2019-06-19 15:02 GMT

ವಾಶಿಂಗ್ಟನ್, ಜೂ. 19: ಪಾಕಿಸ್ತಾನವನ್ನು ಅದರ ಪ್ರಸಕ್ತ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದಕ್ಕಾಗಿ ಆ ದೇಶಕ್ಕೆ ಬಹು ಬಿಲಿಯ ಡಾಲರ್ ಸಾಲ ನೀಡಲು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮುಂದಾಗಿದೆ ಎಂಬ ವರದಿಗಳ ನುಡುವೆಯೇ, ಈ ನೆರವಿಗೆ ಶರತ್ತುಗಳು ಅನ್ವಯವಾಗಬೇಕೆಂದು ಅಮೆರಿಕ ಒತ್ತಾಯಿಸಿದೆ.

ಹೆಚ್ಚುತ್ತಿರುವ ಪಾವತಿ-ಶೇಷ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಪಾಕಿಸ್ತಾನಕ್ಕೆ 6 ಬಿಲಿಯ ಡಾಲರ್ (ಸುಮಾರು 41,826 ಕೋಟಿ ರೂಪಾಯಿ) ಸಾಲ ನೀಡಲು ವಾಶಿಂಗ್ಟನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಐಎಂಎಫ್ ಕಳೆದ ತಿಂಗಳು ಒಪ್ಪಂದವೊಂದಕ್ಕೆ ಬಂದಿದೆ.

 ಚೀನಾದ ಬೃಹತ್ ಸಾಲಗಳನ್ನು ಮರುಪಾವತಿಸುವುದಕ್ಕಾಗಿ ಐಎಂಎಫ್ ಮುಂತಾದ ಜಾಗತಿಕ ಸಾಲ ನೀಡುವ ಸಂಸ್ಥೆಗಳು ಪಾಕಿಸ್ತಾನಕ್ಕೆ ಸಾಲ ನೀಡುವುದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವುದನ್ನು ಸ್ಮರಿಸಬಹುದಾಗಿದೆ.

 ‘‘ನಮ್ಮ ಕಟು ಅಭಿಪ್ರಾಯಗಳನ್ನು ನಾವು ವ್ಯಕ್ತಪಡಿಸಿದ್ದೇವೆ. ಯಾವುದೇ ಸಾಲ ಪ್ಯಾಕೇಜ್ ನೈಜ ಸುಧಾರಣಾ ಕಾರ್ಯಕ್ರಮಗಳನ್ನು ಹೊಂದಿರಬೇಕಾದ ಅಗತ್ಯದ ಬಗ್ಗೆ ನಮ್ಮ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಸಾರ್ವಜನಿಕವಾಗಿಯೇ ಮಾತನಾಡಿದ್ದಾರೆ’’ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ಆಲಿಸ್ ಜಿ. ವೆಲ್ಸ್ ಹೇಳಿದ್ದಾರೆ.

ಪಾಕಿಸ್ತಾನವು ಐಎಂಎಫ್ ಸಾಲವನ್ನು ಚೀನಾದ ಬೃಹತ್ ಸಾಲ ಮರುಪಾವತಿಸಲು ಬಳಸಬಾರದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News