‘ಬೆಲ್ಟ್ ಆ್ಯಂಡ್ ರೋಡ್’ನಿಂದ ತ್ವರಿತ ಆರ್ಥಿಕ ಪ್ರಗತಿ ಸಾಧ್ಯ;ಆದರೆ ಪಾರದರ್ಶಕತೆ, ನೀತಿ ಸುಧಾರಣೆ ಅಗತ್ಯ

Update: 2019-06-19 15:29 GMT

ವಾಶಿಂಗ್ಟನ್, ಜೂ. 19: ಚೀನಾದ ಬೃಹತ್ ಬೆಲ್ಟ್ ಆ್ಯಂಡ್ ರೋಡ್ ಮೂಲಸೌಕರ್ಯ ಯೋಜನೆಯು ಡಝನ್‌ಗಟ್ಟಳೆ ಅಭಿವೃದ್ಧಿಶೀಲ ದೇಶಗಳ ಆರ್ಥಿಕ ಪ್ರಗತಿಯನ್ನು ತ್ವರಿತಗೊಳಿಸಬಹುದಾಗಿದೆ ಹಾಗೂ ಬಡತನವನ್ನು ಕಡಿಮೆಗೊಳಿಸಬಹುದಾಗಿದೆ ಎಂದು ವಿಶ್ವಬ್ಯಾಂಕ್ ಮಂಗಳವಾರ ಬಿಡುಗಡೆ ಮಾಡಿದ ನೂತನ ವರದಿಯೊಂದರಲ್ಲಿ ತಿಳಿಸಿದೆ.

 ಅದೇ ವೇಳೆ, ಯೋಜನೆಯಲ್ಲಿ ಆಮೂಲಾಗ್ರ ನೀತಿ ಸುಧಾರಣೆಗಳು ಮತ್ತು ಹೆಚ್ಚು ಪಾರದರ್ಶಕತೆಯ ಅಗತ್ಯವಿದೆ ಎಂಬುದಾಗಿಯೂ ಅದು ಹೇಳಿದೆ.

ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯು, ಚೀನಾವನ್ನು ಸರಣಿ ಬಂದರುಗಳು, ರೈಲು ಮಾರ್ಗಗಳು, ರಸ್ತೆಗಳು ಮತ್ತು ಸೇತುವೆಗಳು ಹಾಗೂ ಇತರ ಹೂಡಿಕೆಗಳ ಮೂಲಕ ಮಧ್ಯ ಮತ್ತು ದಕ್ಷಿಣ ಏಶ್ಯದ ಮೂಲಕ ಯುರೋಪ್‌ಗೆ ಸಂಪರ್ಕಿಸುವ ಬೃಹತ್ ಯೋಜನೆಯಾಗಿದೆ.

 ಈ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡರೆ, 3.2 ಕೋಟಿ ಜನರನ್ನು ಬಡತನದಿಂದ ಮೇಲೆತ್ತಬಹುದಾಗಿದೆ ಎಂದು ವರದಿ ಹೇಳಿದೆ.

‘‘ಆದಾಗ್ಯೂ, ಇಲ್ಲಿ ಸಾಕಷ್ಟು ಅಪಾಯಗಳಿವೆ’’ ಎಂದು ವಿಶ್ವಬ್ಯಾಂಕ್ ಹೇಳಿದೆ.

‘‘ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ಹಿಂದಿನ ಮಹತ್ವಾಕಾಂಕ್ಷೆಯನ್ನು ಸಾಧಿಸಬೇಕಾದರೆ, ಅದರಲ್ಲಿ ಪಾಲ್ಗೊಳ್ಳುವ ದೇಶಗಳು ಅಷ್ಟೇ ಮಹತ್ವಾಕಾಂಕ್ಷೆಯ ನೀತಿ ಸುಧಾರಣೆಗಳನ್ನು ಜಾರಿಗೆ ತರಬೇಕಾಗಿದೆ’’ ಎಂದು ವಿಶ್ವ ಬ್ಯಾಂಕ್‌ನ ಉಪಾಧ್ಯಕ್ಷ ಸೆಯ್ಲ ಪಝರ್‌ಬಸಿಯೊಗ್ಲು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News