ಖಶೋಗಿ ಕೊಲೆ ಪ್ರಕರಣದಲ್ಲಿ ಸೌದಿ ರಾಜಕುಮಾರನ ಪಾತ್ರ ಸಮರ್ಥಿಸುವ ಖಚಿತ ಪುರಾವೆ ಲಭ್ಯ: ವರದಿ

Update: 2019-06-19 15:39 GMT

ಜಿನೆವಾ, ಜೂ.19: ಕಳೆದ ಅಕ್ಟೋಬರ್‌ನಲ್ಲಿ ನಡೆದ ಸೌದಿ ಅರೇಬಿಯಾದ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆ ಪ್ರಕರಣದಲ್ಲಿ ಸೌದಿ ರಾಜಕುಮಾರನ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆ ಲಭ್ಯವಾಗಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಮಾನವ ಹಕ್ಕುಗಳ ಪರಿಣತ ತಿಳಿಸಿದ್ದು, ಈ ಪ್ರಕರಣದ ಬಗ್ಗೆ ಅಂತರಾಷ್ಟ್ರೀಯ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ವಿಶ್ವಾಸಾರ್ಹ ಪುರಾವೆ ಲಭ್ಯವಿರುವ ಹಿನ್ನೆಲೆಯಲ್ಲಿ ಸೌದಿ ರಾಜಕುಮಾರನೂ ಸೇರಿದಂತೆ ಸೌದಿ ಅರೇಬಿಯಾದ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧ ಇನ್ನಷ್ಟು ತನಿಖೆಯ ಅಗತ್ಯವಿದೆ ಎಂದು ನ್ಯಾಯೇತರ, ಸಂಗ್ರಹ ಅಥವಾ ಸ್ವೇಚ್ಛಾಚಾರದ ಕಾರ್ಯಗಳ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಆ್ಯಗ್ನೆಸ್ ಕ್ಯಾಲಮರ್ಡ್ ಸಲ್ಲಿಸಿರುವ ಹೊಸ ವರದಿಯಲ್ಲಿ ತಿಳಿಸಲಾಗಿದೆ.

ಅಪರಾಧಿಗಳು ಎಂದು ತೀರ್ಮಾನಿಸಿಲ್ಲ. ಆದರೆ, ಸೂಕ್ತ ಪ್ರಾಧಿಕಾರದಿಂದ ಹೆಚ್ಚಿನ ತನಿಖೆ ನಡೆಸಬಹುದಾದ ನಿಟ್ಟಿನಲ್ಲಿ ಖಚಿತ ಪುರಾವೆ ಲಭ್ಯವಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ವರದಿ ತಿಳಿಸಿದೆ. ರಾಜಕುಮಾರನಿಗಿದ್ದ ಅಧಿಕಾರದ ಬಗ್ಗೆ ಖಶೋಗಿಗೆ ತಿಳಿದಿತ್ತು ಮತ್ತು ಆ ಬಗ್ಗೆ ಭೀತಿಯೂ ಇತ್ತು. ತಾನು ನಡೆಸಿರುವುದು ಖಶೋಗಿಯ ಸಾವಿನ ಕುರಿತ ಮಾನವಹಕ್ಕುಗಳ ಸ್ವತಂತ್ರ ತನಿಖೆಯಾಗಿದೆ ಎಂದು ಕ್ಯಾಲಮರ್ಡ್ ಹೇಳಿದ್ದಾರೆ. ರಾಯಭಾರ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವುದೂ ಸೇರಿದಂತೆ ಇತರ ಹಲವು ವಿಷಯಗಳನ್ನು ಪರಿಶೀಲಿಸಿದ್ದೇನೆ ಎಂದವರು ಹೇಳಿದ್ದಾರೆ. ಸೌದಿ ಅರೇಬಿಯಾ ಮತ್ತು ಟರ್ಕಿ ಇದುವರೆಗೆ ನಡೆಸಿರುವ ತನಿಖೆಯು ಕಾನೂನುಬಾಹಿರ ಹತ್ಯೆಯ ತನಿಖೆ ಕುರಿತ ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿಲ್ಲ ಎಂದಿರುವ ಕ್ಯಾಲಮರ್ಡ್, ಈ ಪ್ರಕರಣದ ಬಗ್ಗೆ ಅಧಿಕೃತ ಅಂತರಾಷ್ಟ್ರೀಯ ವಿಚಾರಣೆ ಆರಂಭಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರನ್ನು ಆಗ್ರಹಿಸಿದ್ದಾರೆ.

ಖಶೋಗಿ ಅಮೆರಿಕದ ನಿವಾಸಿಯಾಗಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣದ ಬಗ್ಗೆ ಅಮೆರಿಕದಲ್ಲಿ ಕ್ರಿಮಿನಲ್ ಕಾನೂನುಕ್ರಮ ಜರಗಿಸಲು ಅಮೆರಿಕದ ಎಫ್‌ಬಿಐ ವಿಚಾರಣೆ ಆರಂಭಿಸಬೇಕು ಎಂದವರು ಒತ್ತಾಯಿಸಿದ್ದಾರೆ. ವರದಿಯಲ್ಲಿ ಹೆಸರಿಸಲಾಗಿರುವ 15 ಮಂದಿ ಖಶೋಗಿ ಹತ್ಯೆಗೆ ನಿಯೋಜಿಸಲಾಗಿದ್ದ ತಂಡದಲ್ಲಿದ್ದರು. ಇವರಲ್ಲಿ ಹಲವರು ವರದಿಯಲ್ಲಿ ಸೂಚಿಸಿರುವ(ಮುಚ್ಚಿದ ಕೋಣೆಯೊಳಗೆ ವಿಚಾರಣೆ ನಡೆಸಬೇಕಿರುವ) 11 ಮಂದಿ ಅನಾಮಿಕ ಶಂಕಿತರ ಪಟ್ಟಿಯಲ್ಲಿ ಇಲ್ಲ ಎಂದು ಕ್ಯಾಲಮರ್ಡ್ ಹೇಳಿದ್ದಾರೆ. ಅಪರಾಧ ನಡೆದ ಸ್ಥಳವನ್ನು ಸೂಕ್ತವಾಗಿ ಸ್ವಚ್ಛಗೊಳಿಸುವವರೆಗೆ ರಾಯಭಾರ ಕಚೇರಿಯಲ್ಲಿ ಟರ್ಕಿ ವಿಚಾರಣೆ ನಡೆಸುವುದಕ್ಕೆ ಸೌದಿ ಅರೇಬಿಯಾ ಉದ್ದೇಶಪೂರ್ವಕವಾಗಿ ತಡೆಯೊಡ್ಡಿದೆ. ವಿಚಾರಣೆ ನ್ಯಾಯಸಮ್ಮತವಾಗಿ ನಡೆಯಬೇಕಿದ್ದರೆ ಸೌದಿ ಅರೇಬಿಯಾದಲ್ಲಿ 11 ಶಂಕಿತರ ವಿಚಾರಣೆ ನಡೆಸುವುದನ್ನು ರದ್ದುಮಾಡಬೇಕು ಎಂದವರು ವರದಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News