ಅಹವಾಲು ಆಲಿಸದೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಬಾರದು: ಕೇರಳ ಹೈಕೋರ್ಟ್

Update: 2019-06-19 17:22 GMT

ತಿರುವನಂತಪುರ, ಜೂ. 19: ಮತದಾರರ ಅಹವಾಲು ಆಲಿಸದೆ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ಚುನಾವಣಾ ಆಯೋಗ ತೆಗೆದು ಹಾಕಬಾರದು ಎಂದು ಕೇರಳ ಉಚ್ಚ ನ್ಯಾಯಾಲಯ ಸೂಚಿಸಿದೆ. ಮತದಾರರ ಪಟ್ಟಿಯಿಂದ ತಿರುವನಂತಪುರದ ನಿವಾಸಿ ಸುಬೈರ್ ಅವರ ಹೆಸರನ್ನು ತೆಗೆದು ಹಾಕಿದ ಕುರಿತು ವಿವರವಾದ ತನಿಖೆ ನಡೆಸುವಂತೆ ನ್ಯಾಯಾಲಯ ಜೂನ್ 10ರ ಆದೇಶದಲ್ಲಿ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ. ಕೇರಳದಲ್ಲಿ ಎಪ್ರಿಲ್ 23ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸುಬೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಹೆಸರು ದಾಖಲು ಮಾಡಲಾದ ಕ್ಷೇತ್ರದಲ್ಲಿ ಇಲ್ಲದೇ ಇರುವುದು ತಿಳಿದುಬಂದ ಬಳಿಕ ಸುಬೈರ್ ಅವರ ಹೆಸರನ್ನು ತೆಗೆದು ಹಾಕಲಾಗಿತ್ತು ಎಂದಿದ್ದಾರೆ.

2017 ಅಕ್ಟೋಬರ್ ಹಾಗೂ 2019 ಜನವರಿಯಲ್ಲಿ ಪ್ರಕಟಿಸಲಾದ ಮತದಾರರ ಪಟ್ಟಿಯ ಕರಡಿನಿಂದ ಹೆಸರು ತೆಗೆದಿರುವುದಕ್ಕೆ ಸುಬೈರ್ ಯಾವುದೇ ಪ್ರಶ್ನೆ ಎತ್ತಿಲ್ಲ. ಮೊದಲ ಕರಡಿಗೆ ವ್ಯಾಪಕ ಪ್ರಚಾರ ನೀಡಲಾಗಿತ್ತು ಎಂದು ಚುನಾವಣಾ ಆಯೋಗ ಹೇಳಿದೆ. ‘‘ನಾನು ಮೊದಲ ಮತ ಚಲಾಯಿಸಲು ಆರಂಭಿಸಿದಂದಿನಿಂದ ಇಲ್ಲಿವರೆಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇನೆ. ಆದರೆ, ಮನೆ ದುರಸ್ಥಿ ಕಾರಣಕ್ಕೆ ನಾನು ಮತ್ತು ನನ್ನ ಕುಟುಂಬ ಕೆಲವು ಕಾಲ ಕ್ಷೇತ್ರದಿಂದ ಹೊರಗೆ ಇತ್ತು’’ ಎಂದು ಸುಬೈರ್ ನ್ಯಾಯಾಲಯಕ್ಕೆ ತಿಳಿಸಿದರು. ಮನೆ ದುರಸ್ಥಿ ಅವಧಿಯಲ್ಲಿ ಸುಬೈರ್ ಅವರೊಂದಿಗೆ ಅವರ ಪತ್ನಿ ಹಾಗೂ ಪುತ್ರಿ ಕೂಡ ಕ್ಷೇತ್ರದಿಂದ ಹೊರಗೆ ಹೋಗಿದ್ದರು. ಆದರೆ, ಅವರಿಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ಇದೆ. ಈ ಬಗ್ಗೆ ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿತು. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಸಂಭವಿಸುವುದನ್ನು ತಪ್ಪಿಸಲು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸುವ ಅಗತ್ಯ ಇದೆ ಎಂದು ನ್ಯಾಯಮೂರ್ತಿ ಶಾಜಿ ಪಿ. ಛಾಲಿ ಚುನಾವಣಾ ಆಯೋಗಕ್ಕೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News