‘ಜಿಹಾದ್’ ಪದ ಬಳಸಿದ ಕಾರಣಕ್ಕೆ ಅವರನ್ನು ಭಯೋತ್ಪಾದಕ ಎಂದು ಹೇಳಲು ಅಸಾಧ್ಯ: ಮಹಾರಾಷ್ಟ್ರ ನ್ಯಾಯಾಲಯ

Update: 2019-06-19 17:30 GMT

ಮುಂಬೈ, ಜೂ. 19: ‘ಜಿಹಾದ್’ ಎಂಬ ಪದ ಬಳಸಿದ ಕಾರಣಕ್ಕೆ ಓರ್ವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಕರೆಯಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ನ್ಯಾಯಾಲಯ ಹೇಳಿದೆ. ಭಯೋತ್ಪಾದನೆ ಪ್ರಕರಣದ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ ಬಳಿಕ ಮಹಾರಾಷ್ಟ್ರ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

 ಕಠಿಣ ಯುಎಪಿಎ (ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ), ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಬಾಂಬೆ ಪೊಲೀಸ್ ಕಾಯ್ದೆ ಅಡಿಯಲ್ಲಿ ಮೂವರು ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದ್ದ ಭಯೋತ್ಪಾದನೆ ಪ್ರಕರಣಗಳ ವಿಚಾರಣೆ ನಡೆಸಿದ ಅಕೋಲಾ ಮೂಲದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಎಸ್. ಜಾಧವ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಈದ್ ಆಚರಣೆ ಸಂದರ್ಭ ರಾಜ್ಯದಲ್ಲಿ ಬೀಫ್ ನಿಷೇಧಿಸಿದ ಕುರಿತು 2015 ಸೆಪ್ಟಂಬರ್ 25ರಂದು ಅಕೋಲಾದ ಪುಸಾಡ್ ಪ್ರದೇಶದಲ್ಲಿ ಮಸೀದಿಯ ಹೊರಗೆ ಇಬ್ಬರು ಪೊಲೀಸರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಅಬ್ದುಲ್ ರಝಾಕ್ (24), ಶೊಹಿಬ್ ಖಾನ್ (24) ಹಾಗೂ ಸಲೀಂ ಮಲ್ಲಿಕ್ (26) ವಿರುದ್ಧ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಬ್ದುಲ್ ರಝಾಕ್ ಮಸೀದಿ ಸಮೀಪ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೆ ಚೂರಿಯಿಂದ ಇರಿದಿದಾನೆ. ಅದಕ್ಕಿಂತ ಮೊದಲು ಬೀಫ್ ನಿಷೇಧಿಸಿರುವುದಕ್ಕೆ ತಾನು ಪೊಲೀಸರು ಹತ್ಯೆಗೈಯುತ್ತಿರುವುದಾಗಿ ಆತ ಹೇಳಿದಾನೆ ಎಂದು ಪ್ರಾಸಿಕ್ಯೂಶನ್ ನ್ಯಾಯಾಲಯಕ್ಕೆ ತಿಳಿಸಿತ್ತು.

ಭಯೋತ್ಪಾದಕ ಸಂಘಟನೆಗೆ ಮುಸ್ಲಿಂ ಯುವಕರನ್ನು ಸೇರಿಸಲು ಪ್ರೇರಿಪಿಸುವ ಪಿತೂರಿಯ ಒಂದು ಭಾಗ ಈ ಆರೋಪಿಗಳು ಎಂದು ಎಟಿಎಸ್ ಪ್ರತಿಪಾದಿಸಿತ್ತು. ಗೋ ಹತ್ಯೆಗೆ ನಿಷೇಧ ವಿಧಿಸಿರುವುದಕ್ಕೆ ಕೆಲವು ಸಂಘಟನೆಗಳು ಹಾಗೂ ಸರಕಾರದ ವಿರುದ್ಧ ಹಿಂಸಾಚಾರಕ್ಕೆ ಇಳಿಯುವ ಮೂಲಕ ಆರೋಪಿ ರಝಾಕ್ ಆಕ್ರೋಶ ವ್ಯಕ್ತಪಡಿಸಿದಂತೆ ಇದು ಕಾಣುತ್ತದೆ ಎಂದು ನ್ಯಾಯಮೂರ್ತಿ ಎ.ಎಸ್. ಜಾಧವ್ ಹೇಳಿದ್ದಾರೆ. ‘‘ಜಿಹಾದ್ ಎಂಬ ಪದ ಬಳಸಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ, ಜಿಹಾದ್ ಎಂಬ ಪದ ಬಳಕೆ ಮಾಡಿದ ಕಾರಣಕ್ಕೆ ಆತನನ್ನು ಭಯೋತ್ಪಾದಕನೆಂಬ ತೀರ್ಮಾನಕ್ಕೆ ಬರುವುದು ಸೂಕ್ತವಲ್ಲ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News