ಮೆದುಳಿನ ಉರಿಯೂತ: 113ಕ್ಕೆ ಏರಿದೆ ಸಾವಿನ ಸಂಖ್ಯೆ

Update: 2019-06-19 17:36 GMT

ಪಾಟ್ನಾ, ಜೂ. 19: ಈ ವರ್ಷ ಮೆದುಳು ಉರಿಯೂತ ರೋಗದ 500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಬಿಹಾರದ ಮುಝಪ್ಫರ್‌ಪುರ ಹಾಗೂ ಸಮೀಪದ ಜಿಲ್ಲೆಗಳಲ್ಲಿ ಈ ರೋಗಕ್ಕೆ 113 ಮಕ್ಕಳು ಬಲಿಯಾಗಿದ್ದಾರೆ.

ಮೆದುಳಿನ ಉರಿಯೂತದ ರೋಗಕ್ಕೆ ಬಲಿಯಾದ ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ತಜ್ಞರ ತಂಡವನ್ನು ತುರ್ತಾಗಿ ರೂಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಜೂನ್ 24ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ. ಮೆದುಳು ಉರಿಯೂತದ ಸೋಂಕು ಹರಡುತ್ತಿದ್ದು, ಅದನ್ನು ನಿಯಂತ್ರಿಸಲು ಅಗತ್ಯವಿರುವ ವೈದ್ಯಕೀಯ ತಜ್ಞರೊಂದಿಗೆ 500 ಬೆಡ್ ಇರುವ ತುರ್ತು ನಿಗಾ ಘಟಕದ ವ್ಯವಸ್ಥೆಯನ್ನು ಕೂಡಲೇ ಮಾಡಲು ಕೇಂದ್ರ ಹಾಗೂ ಬಿಹಾರ್ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಇಬ್ಬರು ವಕೀಲರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಮೆದುಳು ಉರಿಯೂತ ರೋಗದಿಂದ ಒಟ್ಟು 113 ಮಕ್ಕಳು ಸಾವನ್ನಪ್ಪಿದ್ದಾರೆ.

 ರಾಜ್ಯ ಸರಕಾರ ನಡೆಸುತ್ತಿರುವ ಶ್ರೀಕೃಷ್ಣಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 91 ಮಂದಿ ಮಕ್ಕಳು ಮೃತಪಟ್ಟಿದ್ದಾರೆ. ಮುಝಪ್ಫರ್ ನಗರದಲ್ಲಿ ಎರಡು ಖಾಸಗಿ ಆಸ್ಪತ್ರೆಗಳಲ್ಲಿ 16 ಮಕ್ಕಳು, ಪಾಟ್ನಾದಲ್ಲಿರುವ ನಲಂದಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಎರಡು ಮಕ್ಕಳು ಹಾಗೂ ಇತರ ಜಿಲ್ಲೆಗಳಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ ಎಂದು ಬಿಹಾರ್ ಆರೋಗ್ಯ ಇಲಾಖೆಯ ಪ್ರಾಥಮಿಕ ಕಾರ್ಯದರ್ಶಿ ಸಂಜಯ್ ಕುಮಾರ್ ಹೇಳಿದ್ದಾರೆ. 1995ರಿಂದ ಮುಝಪ್ಫರ್‌ಪುರದಲ್ಲಿ ಪ್ರತಿ ವರ್ಷ ಮೆದುಳಿನ ಉರಿಯೂತದ ಸೋಂಕು ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಸರಕಾರಕ್ಕೆ ಇದುವರೆಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಬಿಹಾರದ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಅಂಟ್ಲಾಂಟಾ (ಅಮೆರಿಕ)ದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರದ ತಜ್ಞರ ತಂಡ ಸಹಿತ ಹಲವು ತಜ್ಞರ ತಂಡಗಳು ಈ ಬಗ್ಗೆ ಸಂಶೋಧನೆಗಳನ್ನು ನಡೆಸಿವೆ. ಆದರೆ, ರೋಗದ ಮೂಲ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಬಿಹಾರದ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News