ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಬೇಹುಗಾರಿಕೆ ವಿಫಲತೆ: ಕಾಂಗ್ರೆಸ್

Update: 2019-06-19 17:52 GMT

ಹೊಸದಿಲ್ಲಿ, ಜೂ. 19: ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ ಯೋಧರು ಹುತಾತ್ಮರಾದ ಬಗ್ಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ‘ಬೇಹುಗಾರಿಕೆ ವಿಫಲತೆ’ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಉತ್ತರ ನೀಡಬೇಕು ಎಂದಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ 24 ಯೋಧರು ಹುತಾತ್ಮರಾಗಿದ್ದಾರೆ.

 ಮೇಜರ್ ಕೇತನ್ ಶರ್ಮಾ, ರೈಫಲ್‌ಮ್ಯಾನ್ ಅನಿಲ್ ಕುಮಾರ್ ಜಸ್ವಾಲ್, ಹವಿಲ್ದಾರ್ ಅಮರ್‌ಜೀತ್ ಕುಮಾರ್ ಹಾಗೂ ನಾಯಕ್ ಅಜಿತ್ ಕುಮಾರ್ ಹುತಾತ್ಮರಾದ ಯೋಧರು ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಕಳೆದ ಒಂದು ವಾರದಲ್ಲಿ 10 ಯೋಧರು ಹುತಾತ್ಮರಾಗಿದ್ದಾರೆ. ತಾಯ್ನೆಲಕ್ಕಾಗಿ ಅವರ ಬಲಿದಾನಕ್ಕೆ ನಾನು ಸೆಲ್ಯುಟ್ ಸಲ್ಲಿಸುತ್ತೇನೆ ಎಂದು ಸುರ್ಜೇವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ಸೇನಾ ವಾಹನ ಗುರಿಯಾಗಿರಿಸಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ. ಇದು ಸರಕಾರದ ಬೇಹುಗಾರಿಕೆಯ ಅತಿ ದೊಡ್ಡ ವಿಫಲತೆ ಎಂದು ಸುರ್ಜೇವಾಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News