ರಾಹುಲ್ ಗಾಂಧಿ ಯೋಗ ಮಾಡುವುದಿಲ್ಲ, ಅದಕ್ಕೇ ಕಾಂಗ್ರೆಸ್ ಸೋತಿತು: ಬಾಬಾ ರಾಮ್ ದೇವ್

Update: 2019-06-19 18:13 GMT

ಹೊಸದಿಲ್ಲಿ,ಜೂ.19: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಯೋಗವನ್ನು ಮಾಡುವುದಿಲ್ಲ,ಆದ್ದರಿಂದಲೇ ಅವರ ಪಕ್ಷವು ಚುನಾವಣೆಗಳಲ್ಲಿ ಸೋಲನ್ನಪ್ಪಿದೆ ಎಂದು ಯೋಗಗುರು ಬಾಬಾ ರಾಮ್ ದೇವ್ ಅವರು ಹೇಳಿದ್ದಾರೆ.

ಜೂ.21ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಕ್ಕಾಗಿ ಸಜ್ಜಾಗುತ್ತಿರುವ ರಾಮ್ ದೇವ್,ಯಾರು ಯೋಗ ಮಾಡುತ್ತಾರೋ ಅವರು ಒಳ್ಳೆಯ ದಿನಗಳನ್ನು ಕಾಣುತ್ತಾರೆ ಎಂದೂ ಹೇಳಿದರು.

ಯೋಗವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶಂಸಿಸಿದ ಅವರು,ಅದಕ್ಕೂ ಮುನ್ನ ಗಾಂಧಿ ಕುಟುಂಬವನ್ನು ಟೀಕಿಸಲು ಮರೆಯಲಿಲ್ಲ. ಮೋದಿಯವರು ಬಹಿರಂಗವಾಗಿ ಯೋಗವನ್ನು ಮಾಡುತ್ತಾರೆ. ನೆಹರು ಮತ್ತು ಇಂದಿರಾ ಗಾಂಧಿಯವರು ಗುಪ್ತವಾಗಿ ಯೋಗ ಮಾಡುತ್ತಿದ್ದರು. ಆದರೆ ರಾಹುಲ್ ಯೋಗ ಮಾಡುವುದಿಲ್ಲ,ಹೀಗಾಗಿಯೇ ಅವರ ರಾಜಕೀಯ ಹಳಿ ತಪ್ಪಿದೆ. ಯೋಗ ಮಾಡುವವರಿಗೆ ಒಳ್ಳೆಯ ದಿನಗಳು ಬರುತ್ತವೆ ಎಂದರು.

ಆದರೆ ರಾಮ್ ದೇವ್ ಅವರ ಈ ಹೇಳಿಕೆ ಒಂದು ವರ್ಷದ ಹಿಂದೆ ಅವರೇ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿರುವಂತಿದೆ. ಟಿವಿ ವಾಹಿನಿಯೊಂದರಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು,ರಾಹುಲ್ ಮತ್ತು ಸೋನಿಯಾ ಗಾಂಧಿ ನಿಯಮಿತವಾಗಿ ಯೋಗವನ್ನು ಮಾಡುತ್ತಾರೆ. ರಾಹುಲ್ ಮತ್ತು ನಾನು ಗೆಳೆಯರಾಗಿದ್ದೇವೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News