ದಲಿತ ಪಂಚಾಯತ್ ಅಧ್ಯಕ್ಷೆಯ ಪತಿಯನ್ನು ಥಳಿಸಿ ಹತ್ಯೆಗೈದ ಗುಂಪು

Update: 2019-06-20 14:26 GMT

ಗಾಂಧಿನಗರ,ಜೂ.20: ಬೋಟಾದ್ ಜಿಲ್ಲೆಯ ಜಾಲಿಯಾ ಗ್ರಾಮದ ಪಂಚಾಯತ್ ಅಧ್ಯಕ್ಷೆಯ ಪತಿಯನ್ನು  ಗುಂಪೊಂದು ಥಳಿಸಿ ಹತ್ಯೆಗೈದಿದೆ.

ದಲಿತ ಸಮುದಾಯಕ್ಕೆ ಸೇರಿದ ಗೀತಾ ಸೋಲಂಕಿ ಅವರ ಪತಿ ಮನ್ಜಿಭಾಯಿ ಸೋಲಂಕಿ (51) ಕೊಲೆಯಾಗಿರುವ ವ್ಯಕ್ತಿ. ರಣಪುರ-ಬರ್ವಾಲಾ ರಸ್ತೆಯಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಅವರನ್ನು ಆರು ಜನರ ಗುಂಪು ಹತ್ಯೆ ಮಾಡಿದೆ.

 ಗಂಭೀರವಾಗಿ ಗಾಯಗೊಂಡಿದ್ದ ಸೋಲಂಕಿಯನ್ನು ಸಂಬಂಧಿಕರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು. ಕಾರೊಂದು ತನ್ನ ಬೈಕಿಗೆ ಢಿಕ್ಕಿ ಹೊಡೆದಿತ್ತು ಮತ್ತು ಅದರಲ್ಲಿದ್ದ ದುಷ್ಕರ್ಮಿಗಳು ತನ್ನನ್ನು ಕಬ್ಬಿಣದ ಸರಳುಗಳು ಮತ್ತು ಪೈಪ್‌ಗಳಿಂದ ಥಳಿಸಿದ್ದರು ಎಂದು ಸಾಯುವ ಮುನ್ನ ಸೋಲಂಕಿ ಹೇಳಿದ್ದನ್ನು ಸಂಬಂಧಿಗಳು ಧ್ವನಿಮುದ್ರಿಸಿಕೊಂಡಿದ್ದಾರೆ.

ಪತ್ನಿ ಗೀತಾ ಗ್ರಾಮ ಪಂಚಾಯತ್‌ನ ಸರಪಂಚ ಆಗಿದ್ದರೆ,ಸೋಲಂಕಿ ಕೂಡ ಸದಸ್ಯರಾಗಿದ್ದು ಅನೌಪಚಾರಿಕವಾಗಿ ಉಪ ಸರಪಂಚ ಹುದ್ದೆಯನ್ನು ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

"ನಾವು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಸೋಲಂಕಿ ತನ್ನ ಸಂಬಂಧಿಕರಿಗೆ ನೀಡಿರುವ ‘ಮರಣ ಹೇಳಿಕೆ ’ಯನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ" ಎಂದು ಡಿವೈಎಸ್‌ಪಿ ರಾಜದೀಪ ಸಿಂಗ್ ನಕುಂ ತಿಳಿಸಿದರು.

ಸೋಲಂಕಿ ದಂಪತಿ ಕಾಠಿ ದರ್ಬಾರ್ ಸಮುದಾಯದ ಕೆಲವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಮತ್ತು ಅವರಿಂದ ತಮಗೆ ಜೀವ ಬೆದರಿಕೆಯಿದೆ ಎಂದು ಭಾವಿಸಿದ್ದರು. ಹೀಗಾಗಿ ಅವರು ಪೊಲೀಸ್ ರಕ್ಷಣೆಗಾಗಿ ಪದೇಪದೇ ಕೋರಿಕೊಂಡಿದ್ದರು. ಆದರೆ ಅವರಿಗೆ ರಕ್ಷಣೆ ದೊರಕಿರಲಿಲ್ಲ ಎಂದು ಹೇಳಿರುವ ಸೋಲಂಕಿ ಕುಟುಂಬವು,ಈ ಹಿಂದೆಯೂ ಮನ್ಜಿಭಾಯಿ ಸೋಲಂಕಿ ಮೇಲೆ ನಾಲ್ಕು ಬಾರಿ ದಾಳಿಗಳು ನಡೆದಿದ್ದವು ಎಂದು ಆರೋಪಿಸಿದೆ.

ಸೋಲಂಕಿ ಪೊಲೀಸ್ ರಕ್ಷಣೆಯನ್ನು ಕೋರಿ ಜೂ.6ರಂದು ತನ್ನ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಪದ್ಧತಿಯಂತೆ ಸಂಬಂಧಿತ ಪೊಲೀಸ್ ಠಾಣೆಯು ಬೆದರಿಕೆಯ ಬಗ್ಗೆ ಪರಿಶೀಲನೆಯನ್ನು ಕೈಗತ್ತಿಕೊಂಡಿತ್ತು ಎಂದು ಬೋಟಾದ್ ಎಸ್‌ಪಿ ಹರ್ಷದ್ ಮೆಹ್ತಾ ತಿಳಿಸಿದರು.

ಕಳೆದ 20 ವರ್ಷಗಳಿಂದ ನಮ್ಮ ಕುಟುಂಬದವರೇ ಗ್ರಾಮದ ಸರಪಂಚರಾಗಿ ಆಯ್ಕೆಯಾಗುತ್ತಿದ್ದಾರೆ. 2010ರಿಂದಲೂ ನನ್ನ ತಂದೆ ಮತ್ತು ದರ್ಬಾರಿಗಳ ನಡುವೆ ಮನಸ್ತಾಪವಿತ್ತು. ದಲಿತರು ಸರಪಂಚರಾಗಿ ಆಯ್ಕೆಯಾಗುವುದುನ್ನು ದರ್ಬಾರಿಗಳು ಸಹಿಸುತ್ತಿಲ್ಲ ಎಂದು ಸೋಲಂಕಿ ಪುತ್ರ ತುಷಾರ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News