ಕಾಂಗ್ರೆಸ್ ಉತ್ತರಾಧಿಕಾರಿಯನ್ನು ಪಕ್ಷ ನಿರ್ಧರಿಸುತ್ತದೆ: ರಾಹುಲ್ ಗಾಂಧಿ
Update: 2019-06-20 22:02 IST
ಹೊಸದಿಲ್ಲಿ, ಜೂ. 20: ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ತನ್ನ ನಿರ್ಧಾರಕ್ಕೆ ಅಂಟಿ ಕೊಂಡಿರುವ ರಾಹುಲ್ ಗಾಂಧಿ, ನನ್ನ ಮುಂದಿನ ಉತ್ತರಾಧಿಕಾರಿಯನ್ನು ಪಕ್ಷ ನಿರ್ಧರಿಸುತ್ತದೆ, ನಾನಲ್ಲ ಎಂದಿದ್ದಾರೆ.
ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಪಾಲ್ಗೊಳ್ಳಲಾರೆ. ಆಯ್ಕೆಯನ್ನು ಪಕ್ಷ ಮಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಾಹುಲ್ ಗಾಂಧಿ ಅವರ ರಾಜೀನಾಮೆಯನ್ನು ತಿರಸ್ಕರಿಸಿತ್ತು ಹಾಗೂ ಪಕ್ಷವನ್ನು ಎಲ್ಲ ಹಂತದಲ್ಲೂ ಪುನಾರಚಿಸುವಂತೆ ಸೂಚಿಸಿತ್ತು.
ಇದೇ ಸಂದರ್ಭ ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದರು.