ಶಿಕ್ಷಣ ತಜ್ಞರು ಹಸಿವು, ಬಡತನ, ನಿರುದ್ಯೋಗದ ವಿರುದ್ಧ ‘ಸರ್ಜಿಕಲ್ ಸ್ಟ್ರೈಕ್’ ನಡೆಸಲಿ: ಸಿಸೋಡಿಯಾ

Update: 2019-06-20 16:34 GMT

ಹೊಸದಿಲ್ಲಿ, ಜೂ. 20: ಸಮಾಜದಲ್ಲಿರುವ ಹಸಿವು, ನಿರುದ್ಯೋಗ, ಅನಕ್ಷರತೆ, ಹಿಂಸಾಚಾರ ಹಾಗೂ ದ್ವೇಷದ ವಿರುದ್ಧ ಶಿಕ್ಷಣದ ಮೂಲಕ ಹೋರಾಟ ನಡೆಸಬೇಕಾದ ಅಗತ್ಯ ಇದೆ ಎಂದು ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ಹೇಳಿದ್ದಾರೆ.

ಈ ಪಿಡುಗುಗಳ ವಿರುದ್ಧ ‘ಸರ್ಜಿಕಲ್ ಸ್ಟ್ರೈಕ್’ ನಡೆಸಲು ದಿಲ್ಲಿ ಸರಕಾರದ ಶಿಕ್ಷಣ ತಜ್ಞರು ಬದ್ಧರಾಗಬೇಕು ಎಂದು ಅವರು ಪ್ರತಿಪಾದಿಸಿದರು. ಶಿಕ್ಷಣದ ಉದ್ದೇಶ ಮಕ್ಕಳನ್ನು ಸಂತೋಷವಾಗಿ ಇರಿಸುವುದು. ಅವರು ಅದನ್ನು ಹೇಗೆ ಬಳಸುತ್ತಿದ್ದಾರೆ ? ಸಮಾಜದ ಇತರರು ಸಂತೋಷದಿಂದಿರಲು ಕೊಡುಗೆ ನೀಡುತ್ತಿದ್ದಾರೆಯೇ ? ಎಂದು ಅವರು ಪ್ರಶ್ನಿಸಿದರು. ದಿಲ್ಲಿ ಸರಕಾರಿ ಶಾಲೆಗಳ ಮುಖ್ಯಸ್ಥರು ಹಾಗೂ ಇನ್ಸ್‌ಪೆಕ್ಟರ್‌ಗಳ ಆಡಳಿತ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘‘ದಿನಪತ್ರಿಕೆಯ ಶೀರ್ಷಿಕೆ ನೋಡಿದಾಗ ಬೇಸರವಾಗುತ್ತದೆ. ಇದರ ಬಗ್ಗೆ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾರದು. ಅದನ್ನು ನಾವು ಮಾಡಬೇಕು. ನಿರುದ್ಯೋಗ, ಹಸಿವು, ಅನಕ್ಷರತೆ, ಹಿಂಸಾಚಾರ ಹಾಗೂ ದ್ವೇಷ ಮೊದಲಾದ ಪಿಡುಗುಗಳ ದಿನಪತ್ರಿಕೆಯ ಶೀರ್ಷಿಕೆ ಆಗುವುದರ ವಿರುದ್ಧ ದಿಲ್ಲಿಯ ಅಧ್ಯಾಪಕರು ಹಾಗೂ ಶಿಕ್ಷಣ ಸಿಬ್ಬಂದಿ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು’’ ಎಂದು ಅವರು ಹೇಳಿದರು.

 ದಿಲ್ಲಿಯಲ್ಲಿ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಲ್ಲಿನ ಆಪ್ ಸರಕಾರದ ಸಾಧನೆಯನ್ನು ದಿಲ್ಲಿಯ ಶಿಕ್ಷಣ ಸಚಿವರೂ ಆದ ಸಿಸೋಡಿಯಾ ಎಲ್ಲರ ಗಮನಕ್ಕೆ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News