ಉಡುಪಿ: ಬ್ಯಾಂಕ್‌ಗಳ ಠೇವಣಿ ಮೊತ್ತ 22,667ಕೋಟಿ ರೂ.ಗೆ ಏರಿಕೆ

Update: 2019-06-20 16:36 GMT

ಉಡುಪಿ : ಉಡುಪಿ ಜಿಲ್ಲೆಯ ಬ್ಯಾಂಕ್‌ಗಳ ಠೇವಣಿ ಮೊತ್ತವು 2019ರ ಮಾರ್ಚ್ ಅಂತ್ಯದ ವೇಳೆಗೆ 23827ಕೋಟಿರೂ.ಗೆ ಏರಿಕೆಯಾಗಿದ್ದು, ಶೇ.6.54ರ ಪ್ರಗತಿ ದಾಖಲಿಸಲಾಗಿದೆ ಎಂದು ಉಡುಪಿ ಜಿಲ್ಲೆಯ ಲೀಡ್ ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕಿ ಸುಜಾತ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಲೀಡ್ ಬ್ಯಾಂಕ್‌ನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಜಿಲ್ಲೆಯ ಬ್ಯಾಂಕುಗಳು 2018-19ನೇ ಸಾಲಿನ ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳುಗಳಲ್ಲಿ ಸಾಧಿಸಿದ ಪ್ರಗತಿಯ ವರದಿಯನ್ನು ಸಭೆಯ ಮುಂದಿರಿಸಿ ಮಾತನಾಡಿದರು.

ಮಾರ್ಚ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕ್‌ಗಳು ಒಟ್ಟು 11816 ಕೋಟಿ ರೂ. ಸಾಲ ನೀಡಿದ್ದು, ಇದರ ವಾರ್ಷಿಕ ಪ್ರಗತಿ ಶೇ.5.02 ಆಗಿದೆ. ಇದರಿಂದ ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿಯ ಅುಪಾತ ಶೇ.49.59ರಷ್ಟಿದೆ ಎಂದರು.

2018-19ರಲ್ಲಿ ಜಿಲ್ಲೆಯ ಬ್ಯಾಂಕ್‌ಗಳು 8705.63ಕೋಟಿ ರೂ. ಸಾಲದ ಗುರಿಯನ್ನು ಹೊಂದಿದ್ದು, ಮಾರ್ಚ್ ತಿಂಗಳ ಕೊನೆಯವರೆಗೆ 6515 ಕೋಟಿ ರೂ. ಸಾಲವನ್ನು ನೀಡುವ ಮೂಲಕ ಶೇ.74.84 ಸಾಧನೆ ಮಾಡಲಾಗಿದೆ ಎಂದು ಸುಜಾತ ತಿಳಿಸಿದರು.

ಈ ಸಾಲದಲ್ಲಿ ಕೃಷಿ ಕ್ಷೇತ್ರಗಳಿಗೆ 2325 ಕೋಟಿ ರೂ., ಅತೀ ಸಣ್ಣ, ಕಿರು ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ 1900 ಕೋಟಿ ರೂ., ಶಿಕ್ಷಣ ಕ್ಷೇತ್ರಕ್ಕೆ 110ಕೋಟಿ ರೂ. ಹಾಗೂ 510 ಕೋಟಿ ರೂ.ಗಳನ್ನು ಗೃಹ ಸಾಲವಾಗಿ ನೀಡಲಾಗಿದೆ. ಅಲ್ಲದೇ ಇತರ ಆದ್ಯತಾ ಕ್ಷೇತ್ರಗಳಿಗೆ 670 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಮೂಲಕ ಆದ್ಯತಾ ಕ್ಷೇತ್ರಕ್ಕೆ ಇದ್ದ ವಾರ್ಷಿಕ ಗುರಿಯಾದ 7505 ಕೋಟಿ ರೂ.ಗಳಲ್ಲಿ ಕಳೆದ ವರ್ಷ 5515 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ವಿತರಿಸಿ ಶೇ.73.48 ಸಾಧನೆ ಮಾಡಲಾಗಿದೆ.

ಆದ್ಯತೇತರ ಕ್ಷೇತ್ರದಲ್ಲಿ ವಾರ್ಷಿಕ ಗುರಿಯಾದ 1200 ಕೋಟಿ ರೂ.ಗಳಲ್ಲಿ 1000 ಕೋಟಿ ರೂ.ಗಳ ಸಾಲ ವಿತರಣೆಯಾಗಿದೆ ಎಂದರು.
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಟ್ಟು 99,185 ಫಲಾನುಭವಿಗಳಿಗೆ 1355 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ನೀಡಲಾಗಿದೆ. ಇವುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 23,778 ಫಲಾನುಭವಿಗಳಿಗೆ 444 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಸುಜಾತ ವಿವರಿಸಿದರು.

ಇನ್ನು ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ವರ್ಗದ 47,689 ಫಲಾನುಭವಿಗಳಿಗೆ ಒಟ್ಟು 1151 ಕೋಟಿ ರೂ.ಆರ್ಥಿಕ ಸಹಾಯವನ್ನು ನೀಡಲಾಗಿದೆ. ಅದೇ ರೀತಿ 1,37,002 ಮಂದಿ ಮಹಿಳೆಯರಿಗೆ ಒಟ್ಟು 2497 ಕೋಟಿ ರೂ.ಗಳ ಸಾಲವನ್ನು ವಿವಿಧ ಉದ್ದೇಶಗಳಿಗಾಗಿ ವಿತರಿಸಲಾಗಿದೆ. ಕೊನೆಯ ತ್ರೈಮಾಸಿಕದಲ್ಲಿ ಜಿಲ್ಲೆಯ 3146 ವಿದ್ಯಾರ್ಥಿಗಳಿಗೆ ವಿದ್ಯಾಸಾಲದಡಿ 110 ಕೋಟಿ ರೂ.ಗನ್ನು ವಿತರಿಸಲಾಗಿದೆ ಎಂದರು.

ಲೀಡ್ ಬ್ಯಾಂಕ್ ಮುಖ್ಯಪ್ರಬಂಧಕ ರುದ್ರೇಶ್ ಡಿ.ಸಿ. ಮಾತನಾಡಿ, ಜಿಲ್ಲೆ ಯಲ್ಲಿ ಈ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 24,543 ಖಾತೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 355.46 ಕೋಟಿ ೂ. ವಿತರಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿಂಧು ರೂಪೇಶ್ ಅವರು ಜಿಲ್ಲೆಯಲ್ಲಿ ಬ್ಯಾಂಕ್ ಶಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಾಲ ನೀಡಿಕೆಯಲ್ಲಿ ಜಿಲ್ಲೆಯ ವಿಜಯಾ ಬ್ಯಾಂಕ್‌ನ್ನು ಹೊರತು ಪಡಿಸಿ ಕಾರ್ಪೋರೇಷನ್ ಬ್ಯಾಂಕ್ ಸೇರಿದಂತೆ ಹೆಚ್ಚಿನ ಬ್ಯಾಂಕ್‌ಗಳ ಸಾಧನೆ ತೀರಾ ನಿರಾಶಾಜನಕ ಎಂದು ಅಭಿಪ್ರಾಯಪಟ್ಟರಲ್ಲದೇ ಇದರಿಂದ ಸಾಲ ಮತ್ತು ಠೇವಣಿ ಅನುಪಾತ (ಸಿಡಿ ರೆಶ್ಯೂ) ಕೆಳಗಿಳಿದಿದೆ ಎಂದರು.

ಇದಕ್ಕಾಗಿ ಶೈಕ್ಷಣಿಕ ಸಾಲ ಹಾಗೂ ಗೃಹ ಸಾಲ ನೀಡಲು ಹೆಚ್ಚು ಆಸಕ್ತಿ ತೋರಿಸಬೇಕು ಎಂದು ಸಿಂಧು ಸಲಹೆ ನೀಡಿದರು. ಶೈಕ್ಷಣಿಕ ಸಾಲ ನೀಡುವಾಗ ಜಿಲ್ಲೆಯ ಬ್ಯಾಂಕ್ ಶಾಖೆಗಳು ಉಳಿದ ಕಡೆಗಳಿಗಿಂತ ಹೆಚ್ಚು ಕಠಿಣ ನಿಬಂಧನೆಗಳನ್ನು ವಿಧಿಸುತ್ತಿರುವ ಮಾಹಿತಿ ಬಂದಿದೆ ಎಂದೂ ಅವರು ಹೇಳಿದರು.

ಕಾಲೇಜು ಆಡಳಿತ ಮಂಡಳಿ ಹೊಸ ಕೋರ್ಸ್ ಪ್ರಾರಂಭಿಸುವ ನೆಪದಲ್ಲಿ ವಿಪರೀತ ಫೀನ್ನು ಪಡೆಯುತಿದ್ದ, ಇದರಿಂದ ಬ್ಯಾಂಕ್ ಮ್ಯಾನೇಜರ್‌ ಗಳು ಸಾಲ ನೀಡಲು ಹಿಂದೇಟು ಹಾಕುತ್ತಾರೆ. ಕೆಲವು ಕಾಲೇಜುಗಳು ಬಿಎಸ್ಸಿಯಲ್ಲಿ ಸಿವಿಲ್ ಏವಿಯೇಷನ್ ಎಂಬ ಹೊಸ ಸಬ್ಜೆಕ್ಟ್ ಪ್ರಾರಂಭಿಸಿ ಆರು ಲಕ್ಷ ರೂ. ಫೀಸನ್ನು ಕೋಟ್ ಮಾಡುತ್ತಿವೆ ಎಂದು ರುದ್ರೇಶ್ ವಿವರಿಸಿದರು.

ಕೃಷಿ ಕ್ಷೇತ್ರದಲ್ಲಿ ವಾರ್ಷಿಕ ಗುರಿಯ ಶೇ.75 ಸಾಧನೆ ಮಾಡಲಾಗಿದೆ. ಅದೇ ರೀತಿ ಗೃಹ ಸಾಲದಲ್ಲೂ ಗುರಿಯ ಶೇ.68 ಸಾಧನೆಯಾಗಿದೆ. ಸಾಲ ನೀಡಿಕೆಯಲ್ಲಿ ವಿಜಯ ಬ್ಯಾಂಕ್ ಸೇರಿದಂತೆ 18 ಬ್ಯಾಂಕ್‌ಗಳು ಪ್ರಗತಿ ತೋರಿಸಿದರೆ, 13 ಬ್ಯಾಂಕ್‌ಗಳ ಸಾಧನೆ ನೇತ್ಯಾತ್ಮಕವಾಗಿವೆ ಎಂದು ಅವರು ಹೇಳಿದರು.

ಬೆಂಗಳೂರು ಆರ್‌ಬಿಐಯ ಸಹಾಯಕ ಮಹಾಪ್ರಬಂಧಕ ಪಿ.ಕೆ. ಪಟ್ನಾಯಕ್ ಆರ್‌ಬಿಐನ ಹೊಸ ಸುತ್ತೋಲೆ, ಆದೇಶಗಳ ಕುರಿತು ಸಭೆಗೆ ಮಾಹಿತಿ ನೀಡಿದರೆ, ನಬಾರ್ಡ್ ಸಹಾಯಕ ಮಹಾಪ್ರಬಂಧಕ ಎಸ್.ರಮೇಶ್ ನಬಾರ್ಡ್‌ನ ಹೊಸ ಸುತ್ತೋಲೆಗಳ ಕುರಿತು ತಿಳಿಸಿದರು.

ಉದ್ಯೋಗ ಸೃಷ್ಟಿ ಯೋಜನೆಗಳಿಗೆ ಒತ್ತು

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ 2019ರ ಮಾರ್ಚ್‌ವರೆಗೆ ಬ್ಯಾಂಕ್‌ಗಳಿಗೆ 296 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 103 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ. ಮುಖ್ಯ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಮಾರ್ಚ್‌ವರೆಗೆ ಬಂದ 289 ಅರ್ಜಿಗಳಲ್ಲಿ 84 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ ಎಂದು ರುದ್ರೇಶ್ ತಿಳಿಸಿದರು.

ರಾಜ್ಯ ಸರಕಾರ ಪ್ರಾಯೋಜಿತ ಯೋಜನೆಯಡಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಯ ವಾರ್ಷಿಕ ಗುರಿ 19 ಇದ್ದು, 50 ಅರ್ಜಿ ಗಳು ಬಂದಿವೆ. ಈ ಪೈಕಿ 25 ಅರ್ಜಿಗಳು ಮಂಜೂರಾಗಿದೆ. 5 ಅರ್ಜಿಗಳು ತಿರಸ್ಕೃತಗೊಂಡಿದ್ದು 20 ಅರ್ಜಿಗಳು ಬಾಕಿ ಉಳಿದಿದೆ ಎಂದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಚೈತನ್ಯ ಯೋಜನೆಯ ವಾರ್ಷಿಕ ಗುರಿ 65 ಇದ್ದು, 71 ಅರ್ಜಿಗಳು ಬಂದಿವೆ. ಈ ಪೈಕಿ 32 ಅರ್ಜಿಗಳು ಮಂಜೂರುಗೊಂಡಿದ್ದು, 14 ಅರ್ಜಿಗಳು ತಿರಸ್ಕೃತಗೊಂಡು 25 ಅರ್ಜಿಗಳು ಬಾಕಿ ಉಳಿದಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News