ದುಬೈಯಲ್ಲಿ ತಾಯಿ ಸಾವು: ಭಾರತೀಯ, ಪತ್ನಿ ಬಂಧನ

Update: 2019-06-20 16:58 GMT

ದುಬೈ, ಜೂ. 20: ದುಬೈಯ ನ್ಯಾಯಾಲಯವೊಂದು 29 ವರ್ಷದ ಭಾರತೀಯ ವ್ಯಕ್ತಿ ಮತ್ತು ಅವನ ಪತ್ನಿ ವಿರುದ್ಧ ತಾಯಿಯನ್ನು ಕೊಲೆಗೈದ ಆರೋಪವನ್ನು ಹೊರಿಸಿದೆ.

ಮಹಿಳೆಯು ದೈಹಿಕ ಹಲ್ಲೆಯಿಂದಾಗಿ ಮೃತಪಟ್ಟಿದ್ದಾರೆ. ಹಲ್ಲೆಯಿಂದಾಗಿ ಅವರ ಎಲುಬುಗಳು ಮತ್ತು ಪಕ್ಕೆಲುಬುಗಳು ಬಿರುಕು ಬಿಟ್ಟಿದ್ದವು. ಮಹಿಳೆಯು ತೀವ್ರ ಆಂತರಿಕ ರಕ್ತಸ್ರಾವ ಹಾಗೂ ಸುಟ್ಟ ಗಾಯಗಳಿಗೂ ಒಳಗಾಗಿದ್ದರು ಎಂಬುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.

ಮಗ ಮತ್ತು 28 ವರ್ಷದ ಸೊಸೆ ಮಹಿಳೆಯ ಮೇಲೆ ಪದೇ ಪದೇ ಹಲ್ಲೆ ನಡೆಸುತ್ತಿದ್ದರು ಹಾಗೂ ಅವರ ಹಿಂಸೆಯಿಂದಾಗಿ ಮಹಿಳೆಯ ಬಲಗಣ್ಣಿನ ಪಾಪೆ ಮತ್ತು ಎಡಗಣ್ಣಿನ ಒಂದು ಭಾಗ ಹರಿದು ಹೋಗಿತ್ತು ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಆರೋಪಿಗಳ ಗುರುತನ್ನು ಬಹಿರಂಗಪಡಿಸಲಾಗಿಲ್ಲ.

 2018ರ ಜುಲೈಯಿಂದ ಅಕ್ಟೋಬರ್‌ವರೆಗೆ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಸಾಯುವ ಹೊತ್ತಿಗೆ ಅವರು ಕೇವಲ 29 ಕೆಜಿ ತೂಗುತ್ತಿದ್ದರು ಎಂದು ವರದಿ ಹೇಳಿದೆ. ಮಗ ಮತ್ತು ಸೊಸೆ ಮಹಿಳೆಯನ್ನು ಉಪವಾಸ ಕೆಡವಿರುವುದನ್ನು ಇದು ಸೂಚಿಸುತ್ತದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಆರೋಪಿ ದಂಪತಿಯನ್ನು ಬಂಧಿಸಲಾಗಿದೆ. ಆದರೆ ಅವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ದುಬೈಯ ಅಲ್ ಕುಸೈಸ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News